ಲಂಡನ್: ಕ್ರಿಕೆಟ್ ಲೀಗ್ಗಳು ಮತ್ತು ಏಕದಿನ ಸರಣಿಗಳು ಟೆಸ್ಟ್ ಪಂದ್ಯವನ್ನು ಮರೆಮಾಚುವಂತೆ ಮಾಡಿವೆ ಎಂದರೆ ತಪ್ಪಾಗದು. ಈಗ ಕ್ರಿಕೆಟ್ ತಂಡವೊಂದು ಅಂತಾರಾಷ್ಟ್ರೀಯ ಪ್ರವಾಸ ಮಾಡುವಾಗ ಒಂದು ಅಥವಾ ಎರಡು ಟೆಸ್ಟ್ಗಳನ್ನು ಮಾತ್ರ ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತದೆ. ಆದರೆ ಏಕದಿನ ಮತ್ತು ಟಿ20 ಪಂದ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಾಗುತ್ತದೆ. ಇದರಿಂದ ಟೆಸ್ಟ್ ಕ್ವಾಲಿಟಿ ಕಳೆದುಕೊಳ್ಳುತ್ತಿದೆ ಎಂಬ ವಾದ ಕೇಳಿ ಬಂದು ಕೆಲವು ವರ್ಷಗಳೇ ಆಯಿತು.
ಮಾಜಿ ಆಟಗಾರರು ಈ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಈಗ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ -MCC) ಈ ಬಗ್ಗೆ ಧ್ವನಿ ಎತ್ತಿದ್ದು, 2027ರ ಐಸಿಸಿ ಕ್ರಿಕೆಟ್ ವಿಶ್ವಕಪ್ ನಂತರ ಪುರುಷರ ದ್ವಿಪಕ್ಷೀಯ ಏಕದಿನ ಕ್ರಿಕೆಟ್ ಸರಣಿಯನ್ನು ಸೀಮಿತಗೊಳಿಸಲು ಸಲಹೆ ನೀಡಿದೆ. ಅಲ್ಲದೇ ಈಗಾಗಲೇ 2027ರ ವರೆಗಿನ ಕ್ರಿಕೆಟ್ ಕ್ಯಾಲೆಂಡರ್ ಭರ್ತಿ ಆಗಿರುವ ಬಗ್ಗೆಯೂ ಚಿಂತಿಸಿದೆ.
ಎಂಸಿಸಿಯ ವಿಶ್ವ ಕ್ರಿಕೆಟ್ ಸಮಿತಿಯು ಲಾರ್ಡ್ಸ್‌ನಲ್ಲಿ ಎರಡನೇ ಆಶಸ್ ಟೆಸ್ಟ್‌ನ ಸಮಯದಲ್ಲಿ ನಡೆಸಿದ ಸಭೆಯಲ್ಲಿ ಪ್ರಪಂಚಾದ್ಯಂತ ಹೆಚ್ಚುತ್ತಿರುವ ಫ್ರಾಂಚೈಸಿ ಮಟ್ಟದ ಟಿ20 ಕ್ರಿಕೆಟ್ ವೇಗವಾಗಿ ಬೆಳೆಯುತ್ತಿರುವ ಬಗ್ಗೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದೆ.
ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಗ್ಯಾಟಿಂಗ್ ನೇತೃತ್ವದ 13 ಸದಸ್ಯರ ಸಮಿತಿ, "ಏಕದಿನ ಕ್ರಿಕೆಟ್ನ ಗುಣಮಟ್ಟವನ್ನು ಹೆಚ್ಚಿಸಲು ಪ್ರತಿ ವಿಶ್ವಕಪ್‌ಗೆ ಹಿಂದಿನ ಒಂದು ವರ್ಷವನ್ನು ಹೊರತುಪಡಿಸಿ, ದ್ವಿಪಕ್ಷೀಯ ಏಕದಿನ ಸರಣಿಗಳನ್ನು ತೆಗೆದುಹಾಕಬೇಕು. ಜಾಗತಿಕ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಹೆಚ್ಚು ಐಸಿಸಿ ಪಂದ್ಯಗಳಿಗೆ ಅವಕಾಶ ಸಿಗಲಿದೆ. ಹಾಗೆಯೇ ಟೆಸ್ಟ್ಗೆ ಒತ್ತು ಕೊಡಲಾಗುತ್ತದೆ" ಎಂದು ಹೇಳಿದೆ.
ಐಸಿಸಿ ಮತ್ತು ಅನೇಕ ರಾಷ್ಟ್ರಗಳನ್ನು ಟಿ20 ಲೀಗ್ಗಳು ಬಾಧಿಸುತ್ತಿದೆ. ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್ ಅವರು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್ಸಿ-MLC) ನಲ್ಲಿ ಆಡಲು ಅಂತರಾಷ್ಟ್ರೀಯ ತಂಡದ ಒಂದು ಭಾಗದ ಒಪ್ಪಂದವನ್ನೇ ಬಿಟ್ಟಿದ್ದಾರೆ. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಕಳೆದ ವರ್ಷ ತಮ್ಮ ಕೇಂದ್ರ ಒಪ್ಪಂದವನ್ನು ತ್ಯಜಿಸಿ ವಿಶ್ವಾದ್ಯಂತ ಫ್ರಾಂಚೈಸ್ ಕ್ರಿಕೆಟ್ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಈ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸ್ಟಾರ್ ಆಟಗಾರರ ಕೊರತೆ ಎದುರಿಸುತ್ತದೆ.