ಹೈದರಾಬಾದ್(ಡೆಸ್ಕ್): ಭಾರತೀಯರ ಹೃದಯ ಗೆದ್ದಿರುವ ಕೆಲವೇ ವಿದೇಶಿ ಆಟಗಾರರಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿ ವಿಲಿಯರ್ಸ್ ಅಗ್ರಗಣ್ಯರಾಗಿದ್ದಾರೆ. ಅವರು ಐಪಿಎಲ್ನಲ್ಲಿ ಬೆಂಗಳೂರು ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದರೂ ಅವರನ್ನು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಪ್ರೀತಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
15 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಆಡಿರುವ ಅವರು, ಭಾರತದ ವಿರುದ್ಧ ಭಾರತದ ವಿವಿಧ ಸ್ಟೇಡಿಯಂನಲ್ಲಿ ಆಡುವಾಗ ಸಾವಿರಾರು ಅಭಿಮಾನಿಗಳಿಂದ ಗೌರವ ಗಿಟ್ಟಿಸಿಕೊಂಡಿಸಿದ್ದಾರೆ. ಈ ಬಗ್ಗೆ ಆರ್ಸಿಬಿಯ ಪೋಡ್ಕಾಸ್ಟ್ನಲ್ಲಿ ಮಾತನಾಡುವ ವೇಳೆ "ಇಲ್ಲಿನ ಅಭಿಮಾನಿಗಳ ಪ್ರೀತಿಯನ್ನು ನೋಡಿದಾಗ ನಾನೊಬ್ಬ ಭಾರತೀಯ ಎನ್ನುವ ಭಾವನೆ ಉಂಟಾಗುತ್ತದೆ " ಎಂದಿರುವ ಅವರು, ನಾನೇನಾದರೂ ಇಲ್ಲಿಯ ಕ್ರಿಕೆಟರ್ ಆಗಿದ್ದರೆ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ.
" ಕಳೆದ 15 ವರ್ಷಗಳಿಂದ ಭಾರತೀಯ ವಿಧಾನದಲ್ಲಿ ಕೆಲಸ ಮಾಡುತ್ತಾ, ಭಾರತೀಯ ಪ್ರೇಕ್ಷಕರ ಮುಂದೆ ಐಪಿಎಲ್ನಲ್ಲಿ ಆಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನಿಸ್ಸಂಶಯವಾಗಿ ಭಾರತದಲ್ಲಿ ಬೆಳೆಯುವುದು ಆಸಕ್ತಿದಾಯಕವಾಗಿರುತ್ತಿತ್ತು. ಯಾರಿಗೆ ಗೊತ್ತು? ನಾನು ಇಲ್ಲಿ ಜನಿಸಿದ್ದರೆ ಭಾರತ ತಂಡಕ್ಕಾಗಿ ಆಡುವುದಕ್ಕೆ ಆಗುತ್ತಿರಲಿಲ್ಲವೇನೊ, ಏಕೆಂದರೆ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ತುಂಬಾ ಕಠಿಣ, ಒಂದು ವೇಳೆ ಸಿಕ್ಕರೆ ಆತ ವಿಶೇಷ ಆಟಗಾರನಾಗಿರಲೇಬೇಕು" ಎಂದು ಎಬಿಡಿ ಹೇಳಿದ್ದಾರೆ.