ಹೈದರಾಬಾದ್:ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಆಯ್ಕೆಯಾಗಿದ್ದು, ಡಿಸೆಂಬರ್ 16ರಿಂದ ಹರಿಣಗಳ ನಾಡಿಗೆ ಪ್ರಯಾಣ ಆರಂಭಿಸಲಿದೆ. ಆದರೆ, ಇದಕ್ಕೂ ಮುಂಚಿತವಾಗಿ ಮೂರು ದಿನಗಳ ಕಾಲ ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಬಯೋಬಬಲ್ನಲ್ಲಿ ಕ್ವಾರಂಟೈನ್ಗೊಳಗಾಗಲಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕನ್ನಡಿಗ ಮಯಾಂಕ್ ಅಗರವಾಲ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾಗಿದ್ದು, ರನ್ ಮಳೆ ಹರಿಸುವ ಸಾಧ್ಯತೆ ಇದೆ. ಪ್ರವಾಸ ಆರಂಭಿಸುವುದಕ್ಕೂ ಮುಂಚಿತವಾಗಿ ತಮ್ಮ ಅಜ್ಜಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ರೋಹಿತ್ ಶರ್ಮಾ ಗಾಯಗೊಂಡಿರುವ ಕಾರಣ, ಇದೀಗ ಮತ್ತೋರ್ವ ಕನ್ನಡಿಗ ಕೆ.ಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಇದರ ಮಧ್ಯೆ ಅಜ್ಜಿಯ ಆಶೀರ್ವಾದ ಪಡೆದುಕೊಂಡಿದ್ದು, ಅದರ ಫೋಟೋ ತಮ್ಮ ಟ್ವೀಟರ್ನಲ್ಲಿ ಹಾಕಿಕೊಂಡಿದ್ದಾರೆ.
ಮನೆಯಿಂದ ಹೊರಬರುವ ಮುಂಚಿತವಾಗಿ ಅಜ್ಜಿಯ ಆಶೀರ್ವಾದ ಪಡೆದುಕೊಳ್ಳುವುದಾಗಿ ಹೇಳಿದ್ದು, ಇದಿಲ್ಲದೇ ಯಾವುದೇ ಪ್ರವಾಸ ಪ್ರಾರಂಭವಾಗುವುದಿಲ್ಲ ಎಂದು ಮಯಾಂಕ್ ತಿಳಿಸಿದ್ದಾರೆ.
ವಿನೋದ್ ಕಾಂಬ್ಳಿ ಬಳಿ ತರಬೇತಿ ಪಡೆದ ರಹಾನೆ, ರಿಷಬ್
ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ನಿರಾಸೆಗೊಳಗಾಗಿರುವ ಟೀಂ ಇಂಡಿಯಾದ ಬ್ಯಾಟರ್ ಅಜಿಂಕ್ಯ ರಹಾನೆ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬಳಿ ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ.
ವಿನೋದ್ ಕಾಂಬ್ಳಿ ಜೊತೆ ರಿಷಭ್ ಪಂತ್
ಟೀಂ ಇಂಡಿಯಾ ಅನುಭವಿ ಆಟಗಾರನಾಗಿರುವ ರಹಾನೆ ಕಳೆದ ಕೆಲ ತಿಂಗಳಿಂದ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಿಂಚಲು ಇದೀಗ ಮುಂಬೈನಲ್ಲಿ ಮಾಜಿ ಕ್ರಿಕೆಟಿಗನ ಮೊರೆ ಹೋದರು.
ವಿನೋದ್ ಕಾಂಬ್ಳಿ ಮಗನೊಂದಿಗೆ ರಹಾನೆ
1993ರಿಂದ 1995ರವರೆಗೆ ಟೀಂ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿರುವ ಕಾಂಬ್ಳಿ, ರನ್ಗಳಿಸಲು ಪರದಾಡುತ್ತಿರುವ ರಹಾನೆಗೆ ಕೆಲವೊಂದು ಬ್ಯಾಟಿಂಗ್ ಟಿಪ್ಸ್ ಹೇಳಿಕೊಟ್ಟರು. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಬ್ಳಿ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಅಜಿಂಕ್ಯ ಮತ್ತು ರಿಷಬ್ ತರಬೇತಿಗೆ ಸಹಾಯ ಮಾಡಲು ಸಂತೋಷವಾಗಿದೆ. ಹರಿಣಗಳ ನಾಡಿನ ಪರಿಸ್ಥಿತಿಯ ಕುರಿತು ಕೆಲವೊಂದು ಮಾಹಿತಿ ತಿಳಿಸಿದ್ದೇನೆ. SA vs IND ಸರಣಿಗೆ ಅವರಿಗೆ ನನ್ನ ಶುಭಾಯಶಗಳು ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದೆ.