ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟರ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ಟೆಸ್ಟ್ ತಂಡದ ಖಾಯಂ ಆರಂಭಿಕ ಬ್ಯಾಟರ್ ಅಗಿರುವ ಮಯಾಂಕ್ ಅಗರ್ವಾಲ್ ಮತ್ತು ಯುವ ವೇಗಿ ಅರ್ಶದೀಪ್ ಸಿಂಗ್ ಅವರನ್ನು ಮಾತ್ರಾ ಪಂಜಾಬ್ ಕಿಂಗ್ಸ್ ಮೆಗಾ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಂಡಿತ್ತು. ಇದೀಗ ಕನ್ನಡಿಗನನ್ನೇ ನಾಯಕನನ್ನಾಗಿ ಮಾಡಲು ಫ್ರಾಂಚೈಸಿ ತೀರ್ಮಾನಿಸಿದೆ. ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎನ್ನಲಾಗಿದೆ.
ಮಯಾಂಕ್ ಅಗರ್ವಾಲ್ ಆ ತಂಡದ( ಪಂಜಾಬ್ ಕಿಂಗ್ಸ್) ನಾಯಕನಾಗುವ ಎಲ್ಲ ಸಾಧ್ಯತೆಯಿದೆ. ಈ ವಾರದ ಅಂತ್ಯದಲ್ಲಿ ಘೋಷಣೆ ಮಾಡಬಹುದು ಎಂದು ಐಪಿಎಲ್ ಮೂಲ ಪಿಟಿಐಗೆ ಮಾಹಿತಿ ನೀಡಿದೆ.
ಹೆಚ್ಚು ಹಣದೊಂದಿಗೆ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದ ಪಂಜಾಬ್ ಅತ್ಯುತ್ತಮ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಲಿಯಾಮ್ ಲಿವಿಂಗ್ಸ್ಟೋನ್, ಕಗಿಸೊ ರಬಾಡ, ಒಡಿಯನ್ ಸ್ಮಿತ್ ಹಾಗೂ ಎಡಗೈ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಮತ್ತು ತಮಿಳು ನಾಡಿನ ಸ್ಫೋಟಕ ಬ್ಯಾಟರ್ ಶಾರುಖ್ ಖಾನ್ರನ್ನು ತಂಡಕ್ಕೆ ಬರಮಾಡಿಕೊಂಡಿದೆ.