ಚೆನ್ನೈ: ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ಅರ್ಧಶತಕದ ನೆರವಿನಿಂದ ಆರ್‌ಸಿಬಿ ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ 205ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಮಾಡಲು ನಿರ್ಧರಿಸಿ 2ನೇ ಓವರ್ನಲ್ಲೆ ನಾಯಕ ಕೊಹ್ಲಿ(5) ಮತ್ತು ರಜತ್ ಪಾಟಿದಾರ್(1) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ಯುವ ಆಟಗಾರ ದೇವದತ್ ಪಡಿಕ್ಕಲ್ ಜೊತೆಗೂಡಿದ ಮ್ಯಾಕ್ಸ್ವೆಲ್ 3ನೇ ವಿಕೆಟ್ಗೆ 86 ರನ್ ಸೇರಿಸಿ ಚೇತರಿಕೆ ನೀಡಿದರು. ಮ್ಯಾಕ್ಸಿ ಅಬ್ಬರಿಸುತ್ತಿದ್ದರೆ ಇತ್ತ ಪಡಿಕ್ಕಲ್ ಸ್ಟ್ರೈಕ್ ಬದಲಾಯಿಸಿಕೊಡುತ್ತಾ ನಿಧಾನಗತಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಪಡಿಕ್ಕಲ್ 28 ಎಸೆತಗಳಲ್ಲಿ 25 ರನ್ಗಳಿಸಿ 12ನೇ ಓವರ್ನಲ್ಲಿ ಪ್ರಸಿಧ್ ಕೃಷ್ಣಾ ಬೌಲಿಂಗ್ನಲ್ಲಿ ತ್ರಿಪಾಠಿಗೆ ಕ್ಯಾಚ್ ನೀಡಿ ಔಟಾದರು.
ಎಬಿಡಿ- ಮ್ಯಾಕ್ಸ್ವೆಲ್ ಅಬ್ಬರ
ಪಡಿಕ್ಕಲ್ ವಿಕೆಟ್ ಪತನದ ನಂತರ ಒಂದಾದ ಎಬಿಡಿ ಮತ್ತು ಮ್ಯಾಕ್ಸ್ವೆಲ್ ಕೆಕೆಆರ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿ 4ನೇ ವಿಕೆಟ್ಗೆ ಕೇವಲ 35 ಎಸೆತಗಳಲ್ಲಿ 53 ರನ್ ಸೇರಿಸಿದರು. 49 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 78 ರನ್ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಮ್ಯಾಕ್ಸ್ವೆಲ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕಮ್ಮಿನ್ಸ್ಗೆ ವಿಕೆಟ್ ನೀಡಿ ನಿರಾಶೆಯನುಭವಿಸಿದರು.
ಮ್ಯಾಕ್ಸ್ವೆಲ್ ನಂತರ ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ, ವಿಲಿಯರ್ಸ್ ಕೆಕೆಆರ್ ಬೌಲರ್ಗಳನ್ನು ಚೆಂಡಾಡಿದರು. ಅವರು ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸ್ಫೋಟಕ ಸಿಕ್ಸರ್ಗಳ ಸಹಿತ ಅಜೇಯ 76 ರನ್ ಸಿಡಿಸಿದರು. ಆಲ್ರೌಂಡರ್ ಜೆಮೀಸನ್(11) ಜೊತೆಗೆ ಕೊನೆಯ 18 ಎಸೆತಗಳಲ್ಲಿ 56 ರನ್ ಚಚ್ಚಿದರು. ಇದರಲ್ಲಿ ಜಮೀಸನ್ ಪಾಲು 11 ರನ್ ಆದರೆ, ಎಬಿಡಿ ಪಾಲು 45 ರನ್ ಆಗಿತ್ತು.
ಒಟ್ಟಾರೆ ಬೆಂಗಳೂರು ತಂಡ ತನ್ನ 20 ಓವರ್ಗಳ ಕೋಟದಲ್ಲಿ 4 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು.
ಕೆಕೆಆರ್ ಪರ ವರುಣ್ ಚಕ್ರವರ್ತಿ 39ಕ್ಕೆ2, ಪ್ರಸಿಧ್ ಮತ್ತು ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದರು.