ಮೆಲ್ಬೋರ್ನ್ :ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಮುಂಬರುವ ಪಾಕಿಸ್ತಾನ ಪ್ರವಾಸ ಮತ್ತು ಮೊದಲಾರ್ಧದ ಕೆಲವು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ತಂಡದ ವೇಳಾಪಟ್ಟಿಯ ಬದಲಾವಣೆ ಮಾಡಿದ್ದರಿಂದ ನಾನು ಪ್ರವಾಸವನ್ನು ತಪ್ಪಿಸಿಕೊಳ್ಳುವಂತಾಗಿದೆ ಎಂದು ಮ್ಯಾಕ್ಸ್ವೆಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗಿನ ಮಾತುಕತೆಯ ನಂತರ ನಾನು ವಿವಾಹದ ದಿನಾಂಕ ನಿಗದಿಪಡಿಸಿದ್ದಾಗ ಪ್ರವಾಸ ಮತ್ತು ವಿವಾಹಕ್ಕೆ 2 ವಾರಗಳ ಅಂತರವಿತ್ತು. ನಾನು ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಯಸಿದ್ದೆ ಮತ್ತು ನಾನು ಯಾವುದೇ ಪ್ರವಾಸವನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ಸಂತೋಷ ಪಟ್ಟಿದ್ದೆ.
ಆದರೆ, ಕೇಂದ್ರೀಯ ಒಪ್ಪಂದಕ್ಕೆ ನಾನು ಸಿಎ ಸಂಪರ್ಕಿಸಿದಾಗ ಅವರು ಪಾಕಿಸ್ತಾನ ಪ್ರವಾಸದ ದಿನಾಂಕವನ್ನು ತಿಳಿಸಿದರು. ಆದರೆ, ಅದಕ್ಕೂ ಮುನ್ನವೇ ವಿವಾಹದ ದಿನಾಂಕವನ್ನು ನಿಗದಿ ಮಾಡಲಾಗಿತ್ತು ಎಂದು ಮ್ಯಾಕ್ಸ್ವೆಲ್ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದ ಬಳಿಕ ತಿಳಿಸಿದ್ದಾರೆ.