ದುಬೈ: ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ನಿರ್ಣಾಯಕ ಪಂದ್ಯದಲ್ಲಿ ಟಾಸ್ ಕಳೆದುಕೊಂಡ ಆರ್ಸಿಬಿ ಬ್ಯಾಟಿಂಗ್‌ಗೆ ಬರುತ್ತಿದ್ದಂತೆ ಯುವ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್(0) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.
ಆದರೆ ನಾಯಕ ವಿರಾಟ್ ಕೊಹ್ಲಿ 2ನೇ ವಿಕೆಟ್ ಜೊತೆಯಾಟದಲ್ಲಿ ವಿಕೆಟ್ ಕೀಪರ್ ಶ್ರೀಕಾರ್ ಭರತ್ರೊಂದಿಗೆ 68 ರನ್ ಕಲೆ ಹಾಕಿದರು. ಭರತ್ 24 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 32 ರನ್ಗಳಿಸಿ ರಾಹುಲ್ ಚಹರ್ಗೆ ವಿಕೆಟ್ ನೀಡಿದರು.
ನಂತರ ಒಂದಾದ ಕೊಹ್ಲಿ ಮತ್ತು ಮ್ಯಾಕ್ಸ್ವೆಲ್ 3ನೇ ವಿಕೆಟ್ಗೆ 61 ರನ್ ಪೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಮಿಲ್ನೆ ಓವರ್ನಲ್ಲಿ ಅನುಕುಲ್ ರಾಯ್ಗೆ ಕ್ಯಾಚ್ ನೀಡಿ ಔಟಾದರು. ಕೊಹ್ಲಿ 42 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ 51 ರನ್ಗಳಿಸಿದರು.
ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಮ್ಯಾಕ್ಸ್ವೆಲ್ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 56 ರನ್ಗಳಿಸಿ ಬುಮ್ರಾ ಬೌಲಿಂಗ್ನಲ್ಲಿ ಔಟಾದರು. ಇದೇ ಓವರ್ನಲ್ಲಿ 11 ರನ್ಗಳಿಸಿದ್ದ ಎಬಿಡಿ ವಿಲಿಯರ್ಸ್ ಕೂಡ ಔಟಾಗಿದ್ದರಿಂದ ಆರ್ಸಿಬಿ ಕೊನೆಯ 9 ಎಸೆತಗಳಲ್ಲಿ ಕೇವಲ 5 ರನ್ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 36ಕ್ಕೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಬೌಲ್ಟ್ 17ಕ್ಕೆ1, ಆ್ಯಡಮ್ ಮಿಲ್ನೆ 48ಕ್ಕೆ1, ರಾಹುಲ್ ಚಹರ್ 33ಕ್ಕೆ1 ವಿಕೆಟ್ ಪಡೆದರು.