ಶಾರ್ಜಾ :14ನೇ ಆವೃತ್ತಿಯ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಆರ್ಸಿಬಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡದ ಡೇನಿಯಲ್ ಕ್ರಿಶ್ಚಿಯನ್ರನ್ನು ತೆಗಳುವ ಭರದಲ್ಲಿ ಅವರ ಗರ್ಭಿಣಿ ಪತ್ನಿಯನ್ನು ನಿಂದಿಸಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಪಡೆ ಕೇವಲ 138 ರನ್ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಕೆಕೆಆರ್ ಇನ್ನೂ 2 ಎಸೆತಗಳಿರುವಂತೆ ಗೆದ್ದು 2ನೇ ಕ್ವಾಲಿಫೈಯರ್ ಆಗಿ ಫೈನಲ್ ಪ್ರವೇಶಿಸಿತು.
ಆದರೆ, ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ತೋರಿದ ಆಸ್ಟ್ರೇಲಿಯಾದ ಡೇನಿಯಲ್ ಕ್ರಿಶ್ಚಿಯನ್ ಮತ್ತು ಅವರ ಗರ್ಭಿಣಿ ಪತ್ನಿಯನ್ನು ಕೆಟ್ಟದಾಗಿ ಕಮೆಂಟ್ ಮಾಡಿ ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಕುರಿತು ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಕ್ರಿಶ್ಚಿಯನ್ ದಯವಿಟ್ಟು ನನ್ನ ಪತ್ನಿಯನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಪಾರ್ಟ್ನರ್ ಇನ್ಸ್‌ಸ್ಟಾಗ್ರಾಮ್ ಪೋಸ್ಟ್ಗೆ ಸಂಬಂಧಿಸಿ ಬಂದಿರುವ ಕಮೆಂಟ್ಗಳನ್ನು ಒಮ್ಮೆ ನೋಡಿ. ನಿನ್ನೆಯ ಪಂದ್ಯದಲ್ಲಿ ನಾನು ಚೆನ್ನಾಗಿ ಆಡಲಿಲ್ಲ. ಆದರೆ, ಆಟವನ್ನು ಕೇವಲ ಆಟವನ್ನಾಗಿ ನೋಡಿ. ದಯವಿಟ್ಟು ಅವರನ್ನು(ಪತ್ನಿ)ಯನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಎಲಿಮಿನೇಟರ್ ಪಂದ್ಯದಲ್ಲಿ ಡೇನಿಯಲ್ ಕ್ರಿಶ್ಚಿಯನ್ ಕೇವಲ 9 ರನ್ಗಳಿಸಿ ರನ್ಔಟ್ ಆಗಿದ್ದರು. ಬೌಲಿಂಗ್ನಲ್ಲೂ ಕೇವಲ 1.5 ಓವರ್ಗಳಲ್ಲಿ 27 ರನ್ ಬಿಟ್ಟು ಕೊಟ್ಟಿದ್ದರು. ಅದರಲ್ಲೂ 12ನೇ ಓವರ್ನಲ್ಲಿ ಬರೋಬ್ಬರಿ 22 ರನ್ ಬಿಟ್ಟು ಕೊಟ್ಟು ದುಬಾರಿಯಾಗಿದ್ದರು.