ಮುಂಬೈ:ಮೊದಲ ಪಂದ್ಯದ ಸೋಲಿನ ನಂತರ ಅದ್ಭುತವಾಗಿ ತಿರುಗಿಬಿದ್ದು ಗೆಲುವು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸೋಮವಾರ ತನ್ನ 3ನೇ ಪಂದ್ಯದಲ್ಲಿ ಯುವ ಬಳಗವಾಗಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಕಳೆದ ಐಪಿಎಲ್ನಲ್ಲಿ ಎರಡಕ್ಕೆ ಎರಡು ಪಂದ್ಯಗಳನ್ನು ಸೋತಿದ್ದ ಸಿಎಸ್ಕೆ, ಸಾಮ್ಸನ್ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾತುರದಿಂದ ಕಾಯುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯದಲ್ಲಿ 188 ರನ್ಗಳಿಸಿಯೂ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು. ಆದರೆ, ನಂತರದ ಪಂದ್ಯದಲ್ಲಿ ಪಂಜಾಬ್ ತಂಡವನ್ನು ವಾಂಖೆಡೆಯಂತಹ ಬ್ಯಾಟಿಂಗ್ ಸಹಕಾರಿ ಮೈದಾನದಲ್ಲಿ ಕೇವಲ 106ರನ್ಗಳಿಗೆ ಕಟ್ಟಿಹಾಕಿ, ಸುಲಭ ಜಯಸಾಧಿಸಿತ್ತು. ಸಿಎಸ್ಕೆಗೆ ದೀಪಕ್ ಚಹರ್ ಫಾರ್ಮ್ಗೆ ಮರಳಿರುವುದು ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಅವರು ಕಳೆದ ಪಂದ್ಯದಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದರು.
ಇನ್ನು ಮೊಯಿನ್ ಅಲಿ ಕಳೆದ ಎರಡು ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ರೈನಾ, ಪ್ಲೆಸಿಸ್ ಉತ್ತಮ ಟಚ್ನಲ್ಲಿದ್ದಾರೆ. ಆದರೆ, ಆರಂಭಿಕ ರುತುರಾಜ್ ಗಾಯಕ್ವಾಡ್ ಮಾತ್ರ ಸತತ 2 ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿರುವುದು ಸಿಎಸ್ಕೆಗೆ ಹಿನ್ನಡೆಯುನ್ನಂಟು ಮಾಡಿದೆ. ಇಂದಿನ ಪಂದ್ಯದಲ್ಲಿ ಅವರ ಬದಲು ರಾಬಿನ್ ಉತ್ತಪ್ಪ ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ.
ಇನ್ನು ರಾಜಸ್ಥಾನ ರಾಯಲ್ಸ್ ಮೊದಲ ಪಂದ್ಯದಲ್ಲಿ ಗೆಲ್ಲುವ ಪಂದ್ಯವನ್ನು ಕೂದಲೆಳೆಯಂತರದಿಂದ ತಪ್ಪಿಸಿಕೊಂಡಿತ್ತು. ಆದರೆ, 2ನೇ ಪಂದ್ಯದಲ್ಲಿ ಮೋರಿಸ್ ಮತ್ತು ಮಿಲ್ಲರ್ ಅವರ ಜವಾಬ್ದಾರಿಯುತ ಪ್ರದರ್ಶನದ ನೆರವಿನಿಂದ ಡೆಲ್ಲಿ ವಿರುದ್ಧ ಸೋಲುವ ಪಂದ್ಯವನ್ನು ಗೆದ್ದು ಖಾತೆ ತೆರೆದಿದೆ. ಇದೀಗ ಸಿಎಸ್ಕೆ ವಿರುದ್ಧ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ.