ಚೆನ್ನೈ: ಕಳೆದ ಆವೃತ್ತಿಯ ಫೈನಲಿಸ್ಟ್ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈಗಾಗಲೆ ತಲಾ ಒಂದು ಸೋಲು ಮತ್ತು 2 ಗೆಲುವುಗಳೊಂದಿಗೆ ಆರ್ಸಿಬಿ ನಂತರದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿವೆ. ಇಂದು ಎರಡೂ ತಂಡಗಳು ತಮ್ಮ 3ನೇ ಜಯಕ್ಕಾಗಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕಾದಾಡಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ 3ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ. ಇಂದು ಗೆಲ್ಲುವ ತಂಡ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.
ಎರಡೂ ತಂಡಗಳಲ್ಲೂ ಆಳವಾದ ಬ್ಯಾಟಿಂಗ್ ಲೈನ್ಅಪ್ ಮತ್ತು ವಿಶ್ವದರ್ಜೆಯ ಬೌಲರ್ಗಳಿದ್ದಾರೆ. ಆದರೆ, ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಮುಂಬೈ ಡೆಲ್ಲಿ ಎದುರು ಆಡಿದ ಎಲ್ಲಾ 4 ಪಂದ್ಯಗಳನ್ನು ಗೆದ್ದು 12-12 ಇದ್ದ ಮುಖಾಮುಖಿ ಅಂತರವನ್ನು 16-12ಕ್ಕೇ ಏರಿಸಿಕೊಂಡಿತ್ತು.
ಡೆಲ್ಲಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಪಂಜಾಬ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದ ರಾಹುಲ್ ಪಡೆಯನ್ನು ನಿಯಂತ್ರಿಸಿದ್ದರು. ಇದೀಗ ಅವರ ತವರೂರಿನಲ್ಲಿ ಪಂದ್ಯಗಳು ನಡೆಯಲಿದ್ದು, ಡೆಲ್ಲಿ ಅಶ್ವಿನ್ ಅವರನ್ನು ಹೆಚ್ಚಾಗಿ ನಂಬಿಕೊಂಡಿದೆ. ಇವರಿಗೆ ಮತ್ತೊಂದು ಬದಿಯಲ್ಲಿ ಲಲಿಯ್ ಯಾದವ್ ಅಥವಾ ಕರ್ನಾಟಕದ ಪ್ರವೀಣ್ ದುಬೆ ಸಾಥ್ ನೀಡುವ ಸಾಧ್ಯತೆಯಿದೆ.