ಮೈಸೂರು : ಯುವ ಆಟಗಾರ ನಿಕಿನ್ ಜೋಸ್ (85*) ಅವರ ಅದ್ಭುತ ಅರ್ಧ ಶತಕ ಮತ್ತು ಅಮಿತ್ ವರ್ಮಾ (41*) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಮಂಗಳೂರು ಯುನೈಟೆಡ್ ಗೆಲುವು ಸಾಧಿಸಿದೆ. ಶಿವಮೊಗ್ಗ ಸ್ಟ್ರೈಕರ್ಸ್ ನೀಡಿದ್ದ 156 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಮಂಗಳೂರು ಯುನೈಟೆಡ್ ತಂಡ ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ ಮತ್ತೊಂದು ಜಯ ದಾಖಲಿಸಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿಯ ಎಂಟನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ನಾಯಕ ಕೆ. ಗೌತಮ್ ಅವರ ಲೆಕ್ಕಾಚಾರವನ್ನು ವೈಶಾಖ್ ವಿಜಯ್ ಕುಮಾರ್ (21ಕ್ಕೆ 3) ಹಾಗೂ ವೆಂಕಟೇಶ್ (24ಕ್ಕೆ 3) ತಲೆಕೆಳಗೆ ಮಾಡಿದರು. ಇದರಿಂದಾಗಿ ಶಿವಮೊಗ್ಗ ತಂಡ ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಮಂಗಳೂರು ಯುನೈಟೆಡ್ ತಂಡ ನಾಯಕ ಸಮರ್ಥ್ ಅವರ ವಿಕೆಟ್ ನ್ನು ಬೇಗನೇ ಕಳೆದುಕೊಂಡಿತು. ಆದರೆ ನಿಕಿನ್ ಜೋಸ್ ಮತ್ತು ಅಮಿತ್ ವರ್ಮಾ ಉತ್ತಮ ಜೊತೆಯಾಟವಾಡಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಕೇವಲ 56 ಎಸೆತಗಳನ್ನು ಎದುರಿಸಿದ ನಿಕಿನ್ ಜೋಸ್ 5 ಬೌಂಡರಿ ಹಾಗೂ 4 ಸಿಕ್ಸರ್ ಗಳ ನೆರವಿನಿಂದ ಅಜೇಯ 85 ರನ್ ಗಳಿಸಿದರೆ, ಅಮಿತ್ ವರ್ಮಾ 28 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 41 ರನ್ ಗಳಿಸಿದರು.
ಮಿಂಚಿದ ಕದಮ್, ಸ್ಟ್ರೈಕರ್ಸ್ ಸಾಧಾರಣ ಮೊತ್ತ: ರೋಹನ್ ಕದಮ್ (64) ಗಳಿಸಿದ ಅರ್ಧ ಶತಕದ ನೆರವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್ ಮಂಗಳೂರು ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತನ್ನ ಅನುಭವದ ಆಟ ಪ್ರದರ್ಶಿಸಿದ ರೋಹನ್ ಕದಮ್ ಮಂಗಳೂರು ಯುನೈಟೆಡ್‌ನ ಉತ್ತಮ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಮೂಲ್ಯ 64 ರನ್ ಗಳಿಸಿ ತಂಡಕ್ಕೆ ನೆರವಾದರು.