ಬೆಂಗಳೂರು: ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 11 ರನ್ಗಳ ಜಯ ಗಳಿಸಿದ ಗುಲ್ಬರ್ಗ ಮಿಸ್ಟಿಕ್ಸ್ ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ20 ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಲ್.ಆರ್ ಚೇತನ್ ಶ್ರಮ ವ್ಯರ್ಥವಾಗಿದೆ.
221 ರನ್ಗಳ ಬೃಹತ್ ಮೊತ್ತವನ್ನು ಭೇದಿಸಲು ಹೊರಟ ಬೆಂಗಳೂರು ಬ್ಲಾಸ್ಟರ್ಸ್ ತಂಡ ಚೇತನ್ ಎಲ್.ಆರ್. (91) ಹಾಗೂ ಕ್ರಾಂತಿ ಕುಮಾರ್ (47) ಅವರ 116 ರನ್ ಜೊತೆಯಾಟದಿಂದ ಗೆಲ್ಲುವ ಆತ್ಮವಿಶ್ವಾಸ ಹೊಂದಿತ್ತು. ಮನೋಜ ಭಾಂಡಗೆ 32 ರನ್ಗೆ 3 ವಿಕೆಟ್ ಗಳಿಸಿ ಪಂದ್ಯಕ್ಕೆ ತಿರುವು ನೀಡಿದರು. ಅಂತಿಮವಾಗಿ ಬೆಂಗಳೂರು 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬೆಂಗಳೂರು ಬ್ಲಾಸ್ಟರ್ಸ್ಗೆ ಸಿಕ್ಕ 221 ರನ್ ಗುರಿ:ದೇವದತ್ತ ಪಡಿಕ್ಕಲ್ (56*) ಹಾಗೂ ನಾಯಕ ಮನೀಶ್ ಪಾಂಡೆ (41*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಮಹಾರಾಜ ಟ್ರೋಫಿ ಫೈನಲ್ ಪಂದ್ಯದಲ್ಲಿ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ಗೆ 221 ರನ್ಗಳ ಬೃಹತ್ ಗುರಿಯನ್ನು ನೀಡಿತ್ತು. ಚೇಸಿಂಗ್ ಸ್ವರ್ಗ ಎಂದೇ ಕೆರೆದಿರುವ ಚಿನ್ನ ಸ್ವಾಮಿ ಕ್ರಿಡಾಂಗಣ ಬ್ಲಾಸ್ಟರ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು.
ಪ್ರತಿಯೊಬ್ಬ ಬ್ಯಾಟ್ಸ್ಮನ್ ತನ್ನಿಂದಾದ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವುದು ಗುಲ್ಬರ್ಗ ತಂಡಕ್ಕೆ ಹೆಮ್ಮೆಯ ಸಂಗತಿಯಾಯಿತು. ರೋಹನ್ ಪಾಟೀಲ್ (38) ಹಾಗೂ ಜೆಸ್ವತ್ ಆಚಾರ್ಯ (39) 60 ರನ್ಗಳ ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ವೇದಿಕೆ ಹಾಕಿಕೊಟ್ಟರು. ಟೂರ್ನಿಯಲ್ಲಿ ಇದುವರೆಗೂ ಎರಡು ಶತಕ ದಾಖಲಿಸಿರುವ ರೋಹನ್ ಪಾಟೀಲ್ ಅಬ್ಬರದ ಆರಂಭ ನೀಡಿದರು. 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಅಮೂಲ್ಯ 38 ರನ್ ಗಳಿಸಿ ನಿರ್ಗಮಿಸಿದರು. ಜೆಸ್ವತ್ ಆಚಾರ್ಯ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 39 ರನ್ ಸಿಡಿಸಿ ಬೃಹತ್ ಮೊತ್ತಕ್ಕೆ ಮುನ್ನುಡಿ ಬರೆದರು.
ದೇವದತ್ತ ಪಡಿಕ್ಕಲ್ ಪಾಂಡೆ ಜೊತೆಯಾಟದಿಂದ ಬೃಹತ್ ಸ್ಕೋರ್:ಎರಡನೇ ಕ್ವಾಲಿಫಯರ್ನಲ್ಲಿ 96 ರನ್ ಸಿಡಿಸಿ ಜಯದ ರೂವಾರಿ ಎನಿಸಿದ್ದ ದೇವದತ್ತ ಪಡಿಕ್ಕಲ್ ಆರಂಭದಲ್ಲಿ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದರೂ ನಂತರದ ಅಬ್ಬರದ ಹೊಡೆತಗಳಿಗೆ ಮನಸ್ಸು ಮಾಡಿ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 56 ರನ್ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು.