ಬೆಂಗಳೂರು: 2019ರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಸಮೀಪ ಬಂದು ಸೋಲುಂಡದ್ದು ನನಗೆ ತೀವ್ರ ನೋವುಂಟು ಮಾಡಿತು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. 2019ರ ಈ ಪಂದ್ಯದ ಸೋಲಿನ ನಂತರ ಧೋನಿ ವೈಟ್‌ಬಾಲ್ ಕ್ರಿಕೆಟ್ಗೆ (ಏಕದಿನ) ನಿವೃತ್ತಿ ಘೋಷಿಸಿದ್ದರು.
ಇಂಗ್ಲೆಂಡ್‌ನಲ್ಲಿ ನಡೆದ ಕಳೆದ ಸಲದ ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಭಾರತ 240 ರನ್‌ಗಳ ಗುರಿ ಬೆನ್ನಟ್ಟುತ್ತಿತ್ತು. ತಂಡದ ಬ್ಯಾಟಿಂಗ್ ಲೈನಪ್ ದೊಡ್ಡ ಕೊಡುಗೆ ನೀಡುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ 77 ರನ್‌ಗಳ ಅದ್ಭುತ ಆಟವಾಡಿದ್ದರು. ಧೋನಿ ಅರ್ಧಶತಕ ಗಳಿಸಿದ್ದರು. ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಧೋನಿ ರನೌಟ್ ಆಗಿದ್ದರಿಂದ ತಂಡ ಸೋಲನುಭವಿಸಿತ್ತು.
ಟೀಂ ಇಂಡಿಯಾದ ಬೆಸ್ಟ್ ಫಿನಿಶರ್ ಅಂದು ಪಂದ್ಯವನ್ನು ಗೆಲುವಿನೊಂದಿಗೆ ಮುಕ್ತಾಯ ಮಾಡುತ್ತಾರೆ ಎಂದೇ ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ವಿಶ್ವಾದ್ಯಂತ ಕ್ರಿಕೆಟ್ ಪ್ರೇಕ್ಷಕರು ಕಾಯುತ್ತಿದ್ದರು. ಆದರೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಧೋನಿಯನ್ನು ಮಾರ್ಟಿನ್ ಗಪ್ಟಿಲ್ ರನೌಟ್ ಮಾಡಿದಾಗ, ಎಲ್ಲರ ಕನಸು ಕಮರಿ ಹೋಗಿತ್ತು. ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಅಂದಿನ ಸೋಲಿನ ಬಗ್ಗೆ ಮಾತನಾಡಿದ ಧೋನಿ, "ಆ ಸೋಲು ಭಾವನಾತ್ಮಕವಾಗಿ ನೋಯಿಸಿತ್ತು. ಹೀಗಾಗಿ ವೈಟ್‌ಬಾಲ್ ಫಾರ್ಮ್ಯಾಟ್‌ನಿಂದ ನಿವೃತ್ತಿ ಪಡೆಯುವ ಮನಸ್ಸು ಮಾಡಿದೆ" ಎಂದರು.
ಗೆಲ್ಲುವ ಪಂದ್ಯ ಸೋತಾಗ ಹೆಚ್ಚು ನೋವಾಗುತ್ತದೆ:"ನೀವು ಗೆಲ್ಲುವ ಪಂದ್ಯವನ್ನು ಕಳೆದುಕೊಂಡಾಗ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ನಾನು ನನ್ನ ಸಂಪೂರ್ಣ ಯೋಜನೆ ಮಾಡಿದ್ದೆ. ಅದು ನಾನು ಭಾರತಕ್ಕಾಗಿ ಕ್ರಿಕೆಟ್ ಆಡಿದ ಕೊನೆಯ ದಿನವಾಗಿತ್ತು. ಅದಾಗಿ ಒಂದು ವರ್ಷದ ನಂತರ ನಿವೃತ್ತಿ ತೆಗೆದುಕೊಂಡೆ. ಕ್ರಿಕೆಟಿಗರಿಗೆ ಕೆಲವು ಕಿಟ್ಗಳನ್ನು ನೀಡಲಾಗುತ್ತದೆ. ಈ ಪಂದ್ಯದ ಬಳಿಕ ನಾನು ಅದನ್ನೆಲ್ಲಾ ಕೋಚ್ಗೆ ಹಿಂದಿರುಗಿಸಿದೆ. ಆದರೆ ಅವರು ಅದನ್ನು ಇಟ್ಟುಕೊಳ್ಳುವಂತೆ ನನಗೇ ಹೇಳಿದರು. ಆದರೆ ಅವರಿಗೆ ಆಗ ನಾನು ಮಾನಸಿಕವಾಗಿ ನಿವೃತ್ತಿ ತೆಗೆದುಕೊಂಡಿದ್ದರ ಬಗ್ಗೆ ಹೇಗೆ ಹೇಳಲು ಸಾಧ್ಯ?. ಆಗ ನಾನು ನನ್ನ ನಿವೃತ್ತಿಯ ಬಗ್ಗೆ ಬಹಿರಂಗಪಡಿಸಲು ಸಿದ್ಧನಿರಲಿಲ್ಲ" ಎಂದು ಧೋನಿ ತಿಳಿಸಿದರು.
ನಿವೃತ್ತಿ ನಿರ್ಧಾರ ಕಠಿಣ:ದೇಶಕ್ಕಾಗಿ ಆಡುವುದಿಲ್ಲ ಎಂದು ಹೇಳುವುದು ಕಠಿಣ ಭಾವನಾತ್ಮಕ ನಿರ್ಧಾರ ಎಂದು ಧೋನಿ ಹೇಳಿದರು. "ಹೆಚ್ಚು ಭಾವನಾತ್ಮಕವಾಗಿದ್ದಾಗ, 12-15 ವರ್ಷಗಳಲ್ಲಿ ದೇಶಕ್ಕಾಗಿ ಕ್ರಿಕೆಟ್ ಆಡುವ ಏಕೈಕ ಕೆಲಸ ಮಾಡಿರುವಾಗ, ಈ ನಿರ್ಧಾರದ ನಂತರ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುವುದಿಲ್ಲ ಎಂದೆನಿಸಿದಾಗ ಆ ಪ್ರಕಟಣೆ ಬಹಳ ಕಷ್ಟವಾಗುತ್ತದೆ. ದೇಶವನ್ನು ಪ್ರತಿನಿಧಿಸಲು ಬಹಳ ಮಂದಿ ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಂಥವರಲ್ಲಿ ಅವಕಾಶ ಪಡೆದುಕೊಂಡು ಕೆಲವೇ ಅದೃಷ್ಟವಂತರಲ್ಲಿ ನಾವಾಗಿರುತ್ತೇವೆ. ಕಾಮನ್‌ವೆಲ್ತ್ ಗೇಮ್ಸ್ ಆಗಿರಲಿ, ಒಲಿಂಪಿಕ್ಸ್ ಆಗಿರಲಿ, ಒಮ್ಮೆ ನಿವೃತ್ತಿ ಪಡೆದರೆ ನಂತರ ನಾನು ನನ್ನ ದೇಶವನ್ನು ಪ್ರತಿನಿಧಿಸುವ ಸಾಧ್ಯತೆ ಇರುವುದಿಲ್ಲ. ನಂತರ ನಮ್ಮಿಂದ ತಂಡಕ್ಕಾಗಿ ಏನೂ ಮಾಡಲಾಗದು ಎಂಬುದು ತಲೆಗೆ ಬರುತ್ತದೆ" ಎಂದರು.