ಕರ್ನಾಟಕ

karnataka

ETV Bharat / sports

ಧೋನಿ ಜರ್ಸಿ ನಿವೃತ್ತಿಗೊಳಿಸಿದ ಬಿಸಿಸಿಐ: ಸಚಿನ್​ ನಂತರ ಮಾಹಿಗೆ ವಿಶೇಷ ಗೌರವ - ಎಂಎಸ್​ ಧೋನಿ

ಮಹೇಂದ್ರ ಸಿಂಗ್​ ಧೋನಿ ಅವರ ಜರ್ಸಿ ನಂ.7 ಅನ್ನು ಬಿಸಿಸಿಐ ನಿವೃತ್ತಿಗೊಳಿಸಿದೆ. ಹೀಗಾಗಿ ಇನ್ನು ಮುಂದೆ ಬೇರೆ ಯಾವುದೇ ಭಾರತೀಯ ಆಟಗಾರ ಈ ಸಂಖ್ಯೆಯ ಜರ್ಸಿ ಹೊಂದುವಂತಿಲ್ಲ.

Mahendra Singh Dhoni
Mahendra Singh Dhoni

By ETV Bharat Karnataka Team

Published : Dec 15, 2023, 9:40 PM IST

ನವದೆಹಲಿ: ಟೀಮ್​ ಇಂಡಿಯಾದ ಲೆಜೆಂಡರಿ​ ಮಾಜಿ ಕ್ಯಾಪ್ಟನ್​ ಎಂ.ಎಸ್.ಧೋನಿ ಧರಿಸಿರುವ ಐಕಾನಿಕ್ ನಂಬರ್ 7 ಜೆರ್ಸಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿವೃತ್ತಿಗೊಳಿಸಿತು. ಹಾಗಾಗಿ, ಭವಿಷ್ಯದಲ್ಲಿ ಧೋನಿ ಅವರ ಜರ್ಸಿ ಸಂಖ್ಯೆಯಲ್ಲಿ ಯಾರೂ ಧರಿಸುವಂತಿಲ್ಲ.

ಭಾರತ ತಂಡ ಕಂಡ ಯಶಸ್ವಿ ನಾಯಕ ಧೋನಿ. 1983ರ ನಂತರ ವಿಶ್ವಕಪ್​ ಕನಸನ್ನು 2007 ಟಿ20, 2011ರಲ್ಲಿ ಏಕದಿನ ಗೆದ್ದು ನನಸು ಮಾಡಿದ ನಾಯಕ. 2013ರಲ್ಲಿ ಚಾಂಪಿಯನ್ಸ್​ ಟ್ರೋಫಿಯನ್ನು ಗೆದ್ದು, ಐಸಿಸಿ ನಡೆಸುವ ಎಲ್ಲಾ ಟ್ರೋಫಿಗಳನ್ನು ಜಯಿಸಿದ ನಾಯಕನೆಂಬ ಖ್ಯಾತಿಯನ್ನೂ ಅವರು ಗಳಿಸಿದರು. ಮಹೇಂದ್ರ ಸಿಂಗ್​ ಧೋನಿ ತಮ್ಮ ಚಾಣಾಕ್ಷ ನಾಯಕತ್ವ, ಕ್ಷೇತ್ರ ರಕ್ಷಣೆ, ವಿಕೆಟ್​ ಕೀಪಿಂಗ್​, ಸ್ಟಂಪಿಂಗ್​, ಫಿನಿಶರ್​ ಆಗಿಯೂ ಮೆಚ್ಚುಗೆ ಗಳಿಸಿದ್ದಾರೆ.

15 ವರ್ಷಗಳ ವೃತ್ತಿಜೀವನ: ಟೆಸ್ಟ್​ ಕ್ರಿಕೆಟ್​ನಲ್ಲಿ ಮಾಹಿ 90 ಪಂದ್ಯಗಳನ್ನು ಆಡಿದ್ದು, 38.09 ಸರಾಸರಿಯಲ್ಲಿ 4,876 ರನ್ ಗಳಿಸಿದ್ದಾರೆ. ಆರು ಶತಕಗಳು ಮತ್ತು 33 ಅರ್ಧ ಶತಕಗಳನ್ನು ಗಳಿಸಿದ್ದು, 224 ಅತ್ಯುತ್ತಮ ಸ್ಕೋರ್ ಆಗಿದೆ. ಟೆಸ್ಟ್‌ನಲ್ಲಿ ಭಾರತದ ಪರ 14ನೇ ಅತಿ ಹೆಚ್ಚು ರನ್​ ಗಳಿಸಿದ ಆಟಗಾರನೂ ಹೌದು.

ನಾಯಕನಾಗಿ 60 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ಧೋನಿ ಈ ಪೈಕಿ 27 ಪಂದ್ಯಗಳಲ್ಲಿ ಗೆಲುವು, 18ರಲ್ಲಿ ಸೋಲು ಮತ್ತು 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಶೇಕಡಾವಾರು ಗೆಲುವಿನ ಪ್ರಮಾಣ 45.00 ಆಗಿತ್ತು. ಮಾಹಿ ನಾಯಕತ್ವದಲ್ಲಿ ಭಾರತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನ ಪಡೆಯಿತು. 2010-11 ಮತ್ತು 2012-13ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ವೈಟ್‌ವಾಶ್ ಮಾಡಿದ ಏಕೈಕ ಭಾರತೀಯ ನಾಯಕ ಆಗಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಮಾಹಿ ಬಲಿಷ್ಠ ಮುಂದಾಳತ್ವ ಮತ್ತು ಪ್ರದರ್ಶನ ಹೊಂದಿದ್ದರು. 350 ಏಕದಿನ ಪಂದ್ಯಗಳನ್ನು ಆಡಿರುವ ಅವರು 50.57 ಸರಾಸರಿಯಲ್ಲಿ 10 ಶತಕ, 73 ಅರ್ಧಶತಕದ ನೆರನಿಂದ 10,773 ರನ್ ಗಳಿಸಿದ್ದಾರೆ. ಧೋನಿ 200 ಏಕದಿನ ಪಂದ್ಯಗಳನ್ನು ಮುನ್ನಡೆಸಿದ್ದು, ಅದರಲ್ಲಿ 110 ಗೆದ್ದರೆ, 74 ರಲ್ಲಿ ಸೋತಿದೆ. ಐದು ಟೈ, 11 ಫಲಿತಾಂಶರಹಿತ ಪಂದ್ಯವಾಗಿದೆ.

98 ಅಂತರರಾಷ್ಟ್ರೀಯ ಟಿ20ಗಳನ್ನು ಆಡಿದ್ದು, 37.60 ರ ಸರಾಸರಿಯಲ್ಲಿ 1,617 ರನ್​ಗಳಿಸಿದ್ದಾರೆ. 72 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು 41 ಗೆದ್ದು, 28 ಸೋತರೆ ಒಂದು ಟೈನಲ್ಲಿ ಅಂತ್ಯವಾಗಿದೆ ಮತ್ತು ಎರಡು ಫಲಿತಾಂಶ ರಹಿತ ಪಂದ್ಯವಾಗಿದೆ.

ಜರ್ಸಿ ಸಂಖ್ಯೆ ನಿವೃತ್ತಿ ಎಂದರೇನು?: ಕ್ರೀಡಾ ಲೋಕದಲ್ಲಿ ಇಂತಹದ್ದೊಂದು ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ತಂಡಗಳು ಈ ರೀತಿ ನಿವೃತ್ತಿ ಮಾಡಿವೆ. ಚಿಕಾಗೊ ಬುಲ್ಸ್ ಮೈಕೆಲ್ ಜೋರ್ಡಾನ್ ಗೌರವಾರ್ಥವಾಗಿ ಪ್ರಸಿದ್ಧ ಸಂಖ್ಯೆ 23 ಜರ್ಸಿ, ಇಟಾಲಿಯನ್ ಕ್ಲಬ್ ನಪೋಲಿಯು ಡಿಯಾಗೋ ಮರಡೋನಾ ಅವರ ನಂ.10ರ ಜರ್ಸಿಯನ್ನು ನಿವೃತ್ತಿ ಮಾಡಲಾಗಿದೆ. ಬಿಸಿಸಿಐ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ನಂತರ ಧೋನಿ ಅವರ ಜೆರ್ಸಿಯನ್ನು ನಿವೃತ್ತಿ ಮಾಡಲು ನಿರ್ಧರಿಸಿದೆ. ತೆಂಡೂಲ್ಕರ್ ಜರ್ಸಿ ನಂ.10 ಅನ್ನು 2017ರಲ್ಲಿ ಬಿಸಿಸಿಐ ಅದನ್ನು ನಿವೃತ್ತಿಗೊಳಿಸಿತು.

ಇದನ್ನೂ ಓದಿ:ಮಹಿಳಾ ಕ್ರಿಕೆಟ್‌ ಟೆಸ್ಟ್‌: ದೀಪ್ತಿಗೆ 'ಪಂಚ'ಕಜ್ಜಾಯ​; ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಭಾರಿ ಮುನ್ನಡೆ

ABOUT THE AUTHOR

...view details