ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹತ್ವದ ನಿರ್ಧಾರ ಕೈಗೊಂಡಿದೆ. ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹಾಗು ಕ್ರಿಕೆಟ್ ತಂಡದ ನಿರ್ದೇಶಕ ಜಹೀರ್ ಖಾನ್ ಅವರಿಗೆ ಇದೀಗ ಬೇರೆ ಜವಾಬ್ದಾರಿ ನೀಡಿ, ಆದೇಶ ಹೊರಡಿಸಿದೆ.
2017ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ಕ್ಯಾಪ್ಟನ್ ಜಯವರ್ಧನೆ ಆಯ್ಕೆಯಾಗಿದ್ದರು. ಇವರ ತರಬೇತಿ ಅಡಿಯಲ್ಲಿ ತಂಡ ಮೂರು ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಅವರನ್ನ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಆಗಿ ನೇಮಕಗೊಳಿಸಿದೆ. ಇನ್ನು, 2018ರಲ್ಲಿ ಮುಂಬೈ ತಂಡದ ಕ್ರಿಕೆಟ್ ಕಾರ್ಯಾಚರಣೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವೇಗಿ ಜಹೀರ್ ಖಾನ್ ಅವರನ್ನು ಕ್ರಿಕೆಟ್ ಅಭಿವೃದ್ಧಿಯ ಜಾಗತಿಕ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದೆ.
ಮುಂಬೈ ಇಂಡಿಯನ್ಸ್ ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚೆಗೆ ಯುಎಇಯ ಐಎಲ್ಟಿ 20 ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಎಸ್ಎ 20 ಲೀಗ್ಗಳಲ್ಲಿ ಫ್ರಾಂಚೈಸಿ ಖರೀದಿ ಮಾಡಿದೆ. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಜವಾಬ್ದಾರಿಯಲ್ಲಿ ಜಯವರ್ಧನೆ ತಂಡಗಳ ಕಾರ್ಯತಂತ್ರ, ತರಬೇತಿ ನೀಡಲಿದ್ದು, ಆಟಗಾರರು ಜಾಗತಿಕವಾಗಿ ಬೆಳೆಯಲು ನಿರ್ದೇಶನ ನೀಡಲಿದ್ದಾರೆ.