ಹೈದರಾಬಾದ್ (ತೆಲಂಗಾಣ): ವಿಶ್ವಕಪ್ಗೂ ಮುನ್ನ ಶ್ರೀಲಂಕಾ ತಂಡ ಗಾಯದ ಸಮಸ್ಯೆ ಎದುರಿಸಿದ್ದರಿಂದ ಕೆಲವು ಪ್ರಮುಖ ಆಟಗಾರರನ್ನು ಕಳೆದುಕೊಂಡಿತ್ತು. ಪ್ರಮುಖವಾಗಿ ಆಲ್ರೌಂಡರ್ ವನಿಂದು ಹಸರಂಗ ತಂಡದಿಂದ ಹೊರಗುಳಿದರು. ಮಹೇಶ್ ತೀಕ್ಷಣ ಚೇತರಿಸಿಜಕೊಳ್ಳುವ ನಿರೀಕ್ಷೆ ಇದ್ದ ಕಾರಣ ಅವರನ್ನು 15ರ ಬಳಗಕ್ಕೆ ಸೇರಿಸಲಾಗಿತ್ತು. ಸಂಪೂರ್ಣವಾಗಿ ಗುಣಮುಖರಾಗದ ಹಿನ್ನೆಲೆಯಲ್ಲಿ ಮೊದಲ ಪಂದ್ಯವನ್ನು ತೀಕ್ಷಣ ಆಡಿರಲಿಲ್ಲ. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಇವರು ಮೈದಾನಕ್ಕಿಳಿಯಲಿದ್ದಾರೆ ಎಂದು ಶ್ರೀಲಂಕಾದ ಸಹಾಯಕ ಕೋಚ್ ಪಂದ್ಯದ ಮುನ್ನಾದಿನ ಮಾಹಿತಿ ನೀಡಿದರು.
ಮಂಗಳವಾರ ಸಿಂಹಳೀಯರು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 102 ರನ್ನಿಂದ ಸೋಲನುಭವಿಸಿತ್ತು. ತಂಡ ಪಾಕಿಸ್ತಾನದ ವಿರುದ್ಧ ಪುಟಿದೇಳುವ ಭರವಸೆಯಲ್ಲಿದೆ. ಅತ್ತ ನೆದರ್ಲೆಂಡ್ ಮಣಿಸಿರುವ ಪಾಕಿಸ್ತಾನ ಎರಡನೇ ಜಯಕ್ಕೆ ಸಿದ್ಧತೆಯಲ್ಲಿದೆ.
ವಿಶ್ವಕಪ್ನ ಶ್ರೀಲಂಕಾದ ಮೊದಲ ಪಂದ್ಯದಲ್ಲಿ ತೀಕ್ಷಣ ಆಡಿರಲಿಲ್ಲ. ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಅವರು ಸಂಪೂರ್ಣ ಫಿಟ್ ಆಗಿರದ ಕಾರಣ ಅವರನ್ನು ದಕ್ಷಿಣ ಆಫ್ರಿಕಾದ ವಿರುದ್ಧ ಆಡಿಸಿರಲಿಲ್ಲ. ಮಹೇಶ್ ತೀಕ್ಷಣ ತಂಡಕ್ಕೆ ಸೇರಿಕೊಳ್ಳುತ್ತಿರುವುದರಿಂದ ಸ್ಪಿನ್‌ಸ್ನೇಹಿ ಪಿಚ್ಗಳಲ್ಲಿ ಶ್ರೀಲಂಕಾಕ್ಕೆ ಹೆಚ್ಚು ಬಲ ಬಂದಂತಾಗಿದೆ.
ಶ್ರೀಲಂಕಾದ ಸಹಾಯಕ ಕೋಚ್ ನವೀದ್ ನವಾಜ್ ಪಂದ್ಯದ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, "ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅವರೊಂದಿಗೆ ಅಪಾಯ ತೆಗೆದುಕೊಳ್ಳಲು ಬಯಸಲಿಲ್ಲ. ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಹೋಗಲು ಬಯಸಲಿಲ್ಲ. ಹೀಗಾಗಿ ಮಹೇಶ್ ತೀಕ್ಷಣ ಅವರಿಗೆ ವಿಶ್ರಾಂತಿ ನೀಡಿದ್ದೆವು. ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಲಭ್ಯವಿರುತ್ತಾರೆ. ವೈದ್ಯಕೀಯ ಸಲಹೆಯಂತೆ ತಂಡ ಸೇರುವ ಖಾತ್ರಿಯಿದೆ" ಎಂದಿದ್ದಾರೆ.
"ಭಾರತದಲ್ಲಿ ಬ್ಯಾಟಿಂಗ್‌ಸ್ನೇಹಿ ಪಿಚ್ಗಳನ್ನು ಕಾಣುತ್ತಿದ್ದೇವೆ. ನಾವು ಅದಕ್ಕೆ ತಕ್ಕಂತೆ ತಯಾರಿಗಳನ್ನು ಮಾಡಿಕೊಳ್ಳಬೇಕಿದೆ. ಪಿಚ್ಗೆ ತಕ್ಕಂತೆ ತಂಡ ಪ್ರದರ್ಶನ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ದಕ್ಷಿಣ ಆಫ್ರಿಕಾ ವಿರುದ್ಧ 50-60 ರನ್ ಹೆಚ್ಚಿಗೆ ಬಿಟ್ಟುಕೊಟ್ಟೆವು. ಅದನ್ನು ನಿಯಂತ್ರಿಸುವ ಬಗ್ಗೆ ಯೋಚಿಸಬೇಕು. ಒಂದು ತಿಂಗಳಿಗೂ ಹೆಚ್ಚು ಕಾಲ ಈ ಟೂರ್ನಮೆಂಟ್ ನಡೆಯುವುದರಿಂದ ನಾವು ಸತತ ಪ್ರಯಾಣ ಮತ್ತು ಪಂದ್ಯಕ್ಕೆ ತಯಾರಿ ನಡೆಸುವ ಬಗ್ಗೆ ಚಿಂತಿಸಬೇಕು. ಆಟಗಾರರನ್ನು ಅದಕ್ಕೆ ತಕ್ಕಂತೆ ತಯಾರು ಮಾಡಬೇಕಿದೆ. ಪ್ರತಿ ಪಂದ್ಯದ ಫಲಿತಾಂಶದಿಂದ ಒಂದಲ್ಲೊಂದು ವಿಚಾರವನ್ನು ಕಲಿಯುತ್ತಾ ಮುಂದುವರೆಯುತ್ತೇವೆ" ಎಂದು ಹೇಳಿದರು.
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಕಸುನ್ ರಜಿತ, ಮತೀಶ ಪತಿರಣ, ದಿಲ್ಶನ್ ಮಧುಶಂಕ, ದಿಮುತ್ ಕರುಣಾರತ್ನ, ಲಹಿರು ಕುಮಾರರತ್ನ, ದುಶನ್ ಹೇಮಂತ ಮತ್ತು ಮಹೇಶ್ ತೀಕ್ಷಣ.
ಇದನ್ನೂ ಓದಿ:ಧರ್ಮಶಾಲಾ ಮೈದಾನದ ಔಟ್‌ಫೀಲ್ಡ್ ಟೀಕಿಸಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್