ಮುಂಬೈ:ಮನಸ್ಸಿದ್ದರೆ ಮಾರ್ಗ, ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಶ್ರೀಲಂಕಾದ ಯುವ ಆಟಗಾರ ಮಹೀಶ್ ತೀಕ್ಷಣ ಸಾಧಿಸಿ ತೋರಿಸಿದ್ದಾರೆ. 105 ಕೆಜಿ ತೂಕವಿದ್ದ ಕಾರಣ ಫಿಟ್ನೆಸ್ ಕಾರಣ ನೀಡಿ ಪ್ರತಿಭೆಯಿದ್ದರೂ ತೀಕ್ಷಣರನ್ನು 2018ರ ಅಂಡರ್ 19 ವಿಶ್ವಕಪ್ ವೇಳೆ ಶ್ರೀಲಂಕಾ ತಂಡ ಕೈಬಿಟ್ಟಿತ್ತು. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ ಯುವ 'ಮಿಸ್ಟರಿ ಸ್ಪಿನ್ನರ್' 3 ವರ್ಷಗಳ ನಂತರ ಸೀನಿಯರ್ ಟಿ20 ವಿಶ್ವಕಪ್ ಮತ್ತು ವಿಶ್ವದ ಪ್ರಸಿದ್ಧ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅದರಲ್ಲೂ ಲೀಗ್ನ ಯಶಸ್ವಿ ತಂಡದಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಅವಕಾಶ ಪಡೆದಿರುವುದು ಮತ್ತೊಂದು ವಿಶೇಷ.
ಕ್ರೀಡೆಯಲ್ಲಿ ಫಿಟ್ನೆಸ್ ಎಷ್ಟು ಮುಖ್ಯ ಎನ್ನುವುದರನ್ನು ಅರಿತ ತೀಕ್ಷಣ ಅಂಡರ್ 19 ವಿಶ್ವಕಪ್ ತಂಡದಲ್ಲಿ ಅವಕಾಶ ತಪ್ಪಿದ್ದನ್ನು ಲೆಕ್ಕಿಸದೇ 3 ವರ್ಷಗಳಲ್ಲಿ 25ರಿಂದ 30 ಕೆಜಿ ತೂಕ ಇಳಿಸಿಕೊಂಡು ಇದೀಗ ಫಿಟ್ ಅಂಡ್ ಫೈನ್ ಎನಿಸಿಕೊಂಡಿದ್ದಾರೆ. 18ನೇ ವಯಸ್ಸಿನಲ್ಲಿ ಕಿರಿಯರ ತಂಡದಲ್ಲಿ ಅವಕಾಶ ವಂಚಿತರಾದರೂ 3 ವರ್ಷಗಳಲ್ಲಿ ಹಿರಿಯರ ತಂಡದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಕಿರಿಯರ ವಿಶ್ವಕಪ್ ಬದಲು ಹಿರಿಯರ ವಿಶ್ವಕಪ್ ಆಡಿ ಸೈ ಎನಿಸಿಕೊಂಡರು. ಈ ಮೂಲಕ ಹಲವಾರು ಕ್ರಿಕೆಟಿಗರಿಗೆ ಮಾದರಿ ಕೂಡ ಆಗಿದ್ದಾರೆ.