ರಾಜ್ಕೋಟ್: ಮಹಾರಾಷ್ಟ್ರದ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರು 2021ರ ವರ್ಷದಲ್ಲಿ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಐಪಿಎಲ್ನಲ್ಲಿ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದ ಸಿಎಸ್ಕೆ ಬ್ಯಾಟರ್, ಇದೀಗ ತಮ್ಮ ಅಮೋಘ ರನ್ ಬೇಟೆಯನ್ನು ವಿಜಯ ಹಜಾರೆ ಟ್ರೋಫಿಯಲ್ಲೂ ಮುಂದುವರಿಸಿದ್ದಾರೆ.
ಋತುರಾಜ್ ಗಾಯಕ್ವಾಡ್ ಪ್ರಸ್ತುತ ನಡೆಯುತ್ತಿರುವ 50 ಓವರ್ಗಳ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮಧ್ಯ ಪ್ರದೇಶದ ವಿರುದ್ಧ 112 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 136 ರನ್ ಸಿಡಿಸಿ 329 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಲು ನೆರವಾಗಿದ್ದರು.
ಇದೀಗ ಗುರುವಾರ ನಡೆದ ಛತ್ತೀಸ್ಗಢ ವಿರುದ್ಧದ ಪಂದ್ಯದಲ್ಲೂ ಅಜೇಯ ಶತಕ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್ಗಳ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಗಾಯಕ್ವಾಡ್ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 154 ರನ್ಗಳಿಸಿದರು. ಛತ್ತೀಸ್ಗಢ ನೀಡಿದ್ದ 276 ರನ್ಗಳನ್ನು ಮಹಾರಾಷ್ಟ್ರ 47 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಇದಕ್ಕೂ ಕಳೆದ ತಿಂಗಳು ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಪಂದ್ಯಗಳಿಂದ 3 ಅರ್ಧಶತಕ ಸಹಿತ 259 ರನ್ ಸಿಡಿಸಿದ್ದರು.