ಬೆಂಗಳೂರು:ಬೆಂಗಳೂರು ಬ್ಲಾಸ್ಟರ್ಸ್ ತಂಡದಜಗದೀಶ್ ಸುಚಿತ್ ಅವರ ಆಲ್ರೌಂಡ್ ಆಟದ (40 ರನ್, 19ಕ್ಕೆ 2) ಮುಂದೆ ಮೈಸೂರು ವಾರಿಯರ್ಸ್ ತಂಡದ ಆಟ ಕಳೆಗುಂದಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ ಟಿ-20 ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 23 ರನ್ ಅಂತರದ ಜಯ ಸಾಧಿಸಿತು. ಬೆಂಗಳೂರು ಬ್ಲಾಸ್ಟರ್ಸ್ ನೀಡಿದ 158 ರನ್ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮೈಸೂರು ತಂಡ ಬೆಂಗಳೂರನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಇನಿಂಗ್ಸ್ ಆರಂಭಿಸಿದ ಎಲ್.ಆರ್ ಚೇತನ್ (29) ಮತ್ತು ನಾಯಕ ಮಯಾಂಕ್ ಅಗರ್ವಾಲ್ (31) ಮೊದಲ ವಿಕೆಟ್ಗೆ 61 ರನ್ ಗಳಿಸಿ ಭದ್ರ ಬುನಾದಿ ಹಾಕಿದರು. ಬಳಿಕ ಬಂದ ಅನೀಶ್ 23 ಮಾಡಿದರೆ, ಶಿವಕುಮಾರ್ ರಕ್ಷಿತ್ 2, ಅನಿರುದ್ಧ್ ಜೋಶಿ 7 ರನ್ಗೆ ಪೆವಿಲಿಯನ್ ಸೇರಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಈ ಹಂತದಲ್ಲಿ ಜಗದೀಶ್ ಸುಚಿತ್ ಬ್ಯಾಟಿಂಗ್ ನೆರವಾಯಿತು.
ಸುಚಿತ್ ಔಟಾಗುವ ಮೊದಲು ಭರ್ಜರಿ ಬ್ಯಾಟ್ ಬೀಸಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದರು. ಕೊನೆಯಲ್ಲಿ ಕ್ರಾಂತಿಕುಮಾರ್ 15 ರನ್ ಮಾಡಿದರು. ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 157 ರನ್ ಗಳಿಸಿತು. ಮೈಸೂರು ಪರವಾಗಿ ಅನುಭವಿ ಬೌಲರ್ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರು.
ಸಾಧಾರಣ ಮೊತ್ತ ದಾಟದ ವಾರಿಯರ್ಸ್:157 ರನ್ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್ ತಂಡ ಆರಂಭದಿಂದಲೇ ವಿಕೆಟ್ ಕೈಚೆಲ್ಲಿತು. ಆಲೌರಂಡರ್ ಶ್ರೇಯಸ್ ಗೋಪಾಲ್ ಏಕಾಂಗಿಯಾಗಿ ಹೋರಾಡಿ 50 ರನ್ ಗಳಿಸಿದರು. ಪವನ್ ದೇಶಪಾಂಡೆ 20 ರನ್ ಮಾಡಿದ್ದರ ಎರಡನೇ ಅತ್ಯಧಿಕ ಮೊತ್ತವಾಗಿದೆ. ಒಂದು ಹಂತದಲ್ಲಿ 59 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು 100 ರನ್ಗೆ ಅಲೌಟ್ ಆಗುವ ಭೀತಿಯಲ್ಲಿದ್ದ ತಂಡಕ್ಕೆ ಗೋಪಾಲ್ ಆಸರೆಯಾದರು.