ಬೆಂಗಳೂರು :ಮಹಾರಾಜ ಟ್ರೋಫಿಯ ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಶಿವಮೊಗ್ಗ ಲಯನ್ಸ್ ತಂಡವು ಮೈಸೂರು ವಾರಿಯರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಜಯ ಗಳಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ. ಟೂರ್ನಿಯ 11ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಸೋತ ಬಳಿಕ ಆರಂಭವಾದ ಶಿವಮೊಗ್ಗದ ಸೋಲಿನ ಸರಪಳಿ ಅದೇ ತಂಡದ ವಿರುದ್ಧದ ಜಯಭೇರಿಯೊಂದಿಗೆ ಅಂತ್ಯವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ಆರಂಭಿಕರಾದ ರವಿಕುಮಾರ್ ಸಮರ್ಥ್ (17) ಹಾಗೂ ಸಿ.ಎ ಕಾರ್ತಿಕ್ (14) ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಬಳಿಕ ಜೊತೆಯಾದ ನಾಯಕ ಕರುಣ್ ನಾಯರ್ ಹಾಗೂ ಲಂಕೇಶ್ ಕೆ.ಎಸ್ 40 ರನ್‌ಗಳ ಜೊತೆಯಾಟ ಆಡುವ ಮೂಲಕ ಮೈಸೂರಿನ ಇನ್ನಿಂಗ್ಸ್ಗೆ ಬಲ ನೀಡಿದರು. ಈ ಹಂತದಲ್ಲಿ ಪ್ರಣವ್ ಭಾಟಿಯಾ ಬೌಲಿಂಗ್‌ನಲ್ಲಿ ಲಂಕೇಶ್ ವಿಕೆಟ್ ಒಪ್ಪಿಸಿದರು. ಬಳಿಕ ಅನುಭವಿ ಆಟಗಾರ ಶೋಯೆಬ್ ಮ್ಯಾನೇಜರ್ (14), ಶ್ರೇಯಸ್ ಗೋಪಾಲ್ ಎಸೆತದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ ಶಿವಮೊಗ್ಗ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದ ಕರುಣ್ ನಾಯರ್ 16ನೇ ಓವರ್‌ನಲ್ಲಿ ರನೌಟ್ಗೆ ಬಲಿಯಾದರು. ಕೆಳ ಕ್ರಮಾಂಕದಲ್ಲಿ ಮನೋಜ್ ಭಾಂಡಗೆ 20 ಹಾಗೂ ಜೆ.ಸುಚಿತ್ 18 ರನ್ ಗಳಿಸುವ ಮೂಲಕ ತಂಡಕ್ಕೆ ಅಲ್ಪ ನೆರವಾದರು. ಅಂತಿವಾಗಿ 8 ವಿಕೆಟ್ ಕಳೆದುಕೊಂಡ ಮೈಸೂರು ವಾರಿಯರ್ಸ್ 162 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ತಂಡ ತನ್ನ 5ನೇ ಓವರ್‌ನಲ್ಲಿ ರೋಹನ್ ಕದಂ (15) ವಿಕೆಟ್ ಕಳೆದುಕೊಂಡಿತು. ನಂತರ ಬಂದ ರೋಹನ್ ನವೀನ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಭರವಸೆಯ ಆರಂಭ ಪಡೆದ ರೋಹಿತ್ ಕುಮಾರ್ ಕೂಡ 12 ರನ್ ಗಳಿಸಿದ್ದಾಗ ಕಶಾಲ್ ವಾಧ್ವಾನಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಆದರೆ ಮತ್ತೊಂದು ತುದಿಯಲ್ಲಿದ್ದ ಆರಂಭಿಕ ಆಟಗಾರ ನಿಹಾಲ್ ಉಲ್ಲಾಳ್, ಅಭಿನವ್ ಮನೋಹರ್ ಜೊತೆಗೂಡಿ 38 ರನ್‌ಗಳ ಜೊತೆಯಾಟ ಆಡುವ ಮೂಲಕ ನಿರ್ಣಾಯಕ ಪಾತ್ರ ನಿರ್ವಹಿಸಿದರು.