ಬೆಂಗಳೂರು :ಮನೋಜ್ ಭಾಂಡಗೆ (ಅಜೇಯ 32 ರನ್ ಮತ್ತು 19ಕ್ಕೆ 4 ವಿಕೆಟ್) ಅವರ ಆಲ್‌ರೌಂಡ್ ಪ್ರದರ್ಶನ ಹಾಗೂ ನಾಯಕ ಕರುಣ್ ನಾಯರ್ (57) ಅರ್ಧಶತಕದ ಬಲದಿಂದ ಮೈಸೂರು ವಾರಿಯರ್ಸ್ ತಂಡವು ಗುಲ್ಬರ್ಗಾ ಮಿಸ್ಟಿಕ್ಸ್ನ್ನು 54 ರನ್‌ಗಳಿಂದ ಮಣಿಸಿತು. ಈ ಮೂಲಕ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ಮೊದಲ ಜಯ ಸಾಧಿಸಿದೆ.
ಬುಧವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮೈಸೂರು ವಾರಿಯರ್ಸ್ಗೆ ಆರಂಭದಲ್ಲೇ ಬ್ಯಾಟರ್ ಸಿ.ಎ ಕಾರ್ತಿಕ್ (13) ಅವರು ಅಭಿಲಾಷ್ ಶೆಟ್ಟಿಗೆ ವಿಕೆಟ್ ಒಪ್ಪಿಸಿದರು. ಆದಾಗ್ಯೂ ರವಿಕುಮಾರ್ ಸಮರ್ಥ್ (48) ಬ್ಯಾಟ್‌ನಿಂದ ಉತ್ತಮ ಕೊಡುಗೆ ಮೂಡಿ ಬಂತು. ಈ ಹಂತದಲ್ಲಿ ಮೈಸೂರು ವಾರಿಯರ್ಸ್ ನಾಯಕ ಕರುಣ್ ನಾಯರ್ ಸಮರ್ಥ್ ಜೊತೆಗೂಡಿ ರನ್ ವೇಗ ಹೆಚ್ಚಿಸಿದರು.
ಎರಡನೇ ವಿಕೆಟ್‌ಗೆ ಈ ಸಮರ್ಥ್ - ಕರುಣ್ ಜೋಡಿ 62 ಎಸೆತಗಳಲ್ಲಿ 91 ರನ್ ಜೊತೆಯಾಟವಾಡಿತು. ಅರ್ಧಶತಕದ ಸನಿಹದಲ್ಲಿದ್ದ ಸಮರ್ಥ್, ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ವರ್ಮಾ ಬೌಲಿಂಗ್‌ನಲ್ಲಿ ವಿಕೆಟ್ ಕೈಚೆಲ್ಲಿದರು. ಆದರೆ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ ನಾಯಕ ಕರುಣ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ದಾಖಲಿಸಿದರು. ನಂತರ ಬಂದ ಜೆ.ಸುಚಿತ್ (17), ಅವರ ಹಿಂದೆಯೇ ಕರುಣ್ ನಾಯರ್ (57) ಕೂಡ ಔಟಾದರು. ಆದರೆ ಐದನೇ ಕ್ರಮಾಂಕದಲ್ಲಿ ಬಂದ ಮನೋಜ್ ಭಾಂಡಗೆ 15 ಎಸೆತಗಳಲ್ಲಿ ಅಜೇಯ 32 ಮತ್ತು ಶಿವಕುಮಾರ್ ರಕ್ಷಿತ್ 8 ಎಸೆತಗಳಲ್ಲಿ 21 ರನ್ ಮೂಲಕ ಸ್ಫೋಟಕ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳ ಅಂತ್ಯಕ್ಕೆ ತಂಡದ ಮೊತ್ತವನ್ನು 5 ವಿಕೆಟ್‌ಗೆ 198ಕ್ಕೆ ಕೊಂಡೊಯ್ದರು.