ಬೆಂಗಳೂರು: ನಿರ್ಣಾಯಕ ಪಂದ್ಯದಲ್ಲಿ ನಾಯಕನ ಆಟವಾಡಿದ ಲವ್ನೀತ್ ಸಿಸೋಡಿಯಾ (80 ರನ್) ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಹುಬ್ಬಳ್ಳಿ ಟೈಗರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಹುಬ್ಬಳ್ಳಿ ಟೈಗರ್ಸ್ ತಂಡ ಪ್ಲೇ ಅಫ್ ಹಂತಕ್ಕೇರಿದೆ. ಹುಬ್ಬಳ್ಳಿ ತಾನಾಡಿದ 10 ಪಂದ್ಯಗಳಲ್ಲಿ 5 ಗೆದ್ದು 5 ರಲ್ಲಿ ಸೋಲುವ ಮೂಲಕ 10 ಅಂಕ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದು ಈ ಸ್ಥಾನ ಗಿಟ್ಟಿಸಿಕೊಂಡಿತು. ಇಂದು ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಬಳ್ಳಿ ತಂಡ ಮೈಸೂರು ವಾರಿಯರ್ಸ್ ಎದುರಿಸಲಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ತಂಡ ಅಭಿನವ್ ಮನೋಹರ್ ಔಟಾಗದೇ 69 ಹಾಗೂ ಅಮಿತ್ ವರ್ಮಾರ 47 ರನ್ ಬಾರಿಸಿ ತಂಡಕ್ಕೆ ನೆರವಾದರು. ಆರಂಭಿಕ ಸಮರ್ಥ್ 31 ರನ್ ಚಚ್ಚಿದರು. ಇದರಿಂದ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಹುಬ್ಬಳ್ಳಿ ಟೈಗರ್ಸ್ ಪರ ನವೀನ್ 2 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.
ಗೆಲ್ಲಲೇಬೇಕಾದ ಪಂದ್ಯದಲ್ಲಿ 185 ರನ್ಗಳ ಕಠಿಣ ಸವಾಲು ಪಡೆದ ಹುಬ್ಬಳ್ಳಿ ತಂಡಕ್ಕೆ ನಾಯಕ ಲವ್ನೀತ್ ಸಿಸೋಡಿಯಾ ಕನಸಿನ ಆರಂಭ ನೀಡಿದರು. ಮಹಮದ್ ತಾಹಾ ಜೊತೆ ದೊಡ್ಡ ಇನಿಂಗ್ಸ್ ಕಟ್ಟಿದ ಲವ್ನೀತ್ ಮೊದಲ ವಿಕೆಟ್ಗೆ 88 ರನ್ ಕಲೆ ಹಾಕಿದರು. ಉತ್ತಮವಾಗಿ ಆಡುತ್ತಿದ್ದ ತಾಹಾ 34 ರನ್ಗೆ ಔಟಾದರು. ಬಳಿಕ ಬಂದ ಶಿವಕುಮಾರ್ ಕೂಡ 34 ರನ್ ಸೇರಿಸಿದರು.