ಬೆಂಗಳೂರು:ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಲವನಿತ್ ಸಿಸೋಡಿಯಾ ಹಾಗೂ ಕೆ. ಶ್ರಿಜಿತ್ ದಾಖಲಿಸಿದ 106 ರನ್‌ಗಳ ಜೊತೆಯಾಟದ ನೆರವಿನಿಂದ ಗುಲ್ಬರ್ಗಾ ನೀಡಿದ 139 ರನ್‌ಗಳ ಗುರಿಯನ್ನು ಹುಬ್ಬಳ್ಳಿ ತಂಡ ಕೇವಲ 15.2 ಓವರ್‌ಗಳಲ್ಲಿ ತಲುಪಿ ಜಯದ ಕೇಕೆ ಹಾಕಿತು.
ನಗರದ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತ ಗುಲ್ಬರ್ಗಾ ಮಿಸ್ಟಿಕ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕರಾದ ಚೇತನ್ ಎಲ್. ಆರ್ (10) ಆದರ್ಶ್ ಪ್ರಜ್ವಲ್ (14)ರನ್ ಮಾತ್ರ ಗಳಿಸಿ ಪವರ್ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ ಸೇರಿದರು. ನಂತರ ಬಂದ ಕೆ. ವಿ. ಅನೀಶ್ (16) ಸ್ಮರಣ್. ಆರ್ (15), ಅಮಿತ್ ವರ್ಮಾ (19) ಹಾಗೂ ಮ್ಯಾಕ್ನೈಲ್ ನೊರೊನ್ಹಾ (23) ರನ್ ಗಳಿಸುವ ಮೂಲಕ ತಂಡಕ್ಕೆ ಅಲ್ಪ ಕೊಡುಗೆ ನೀಡಿದರು.
ಬ್ಯಾಟಿಂಗ್ ವೈಫಲ್ಯಕ್ಕೀಡಾದ ಗುಲ್ಬರ್ಗಾ ತಂಡ 19.3 ಓವರ್‌ಗಳಲ್ಲಿ 138 ರನ್ ಗಳಿಸಿ ಆಲೌಟ್ ಆಯಿತು. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ 21 ರನ್ಗೆ 3 ವಿಕೆಟ್ ಪಡೆದು ಮಿಂಚಿದರೆ, ವಿದ್ವತ್ ಕಾವೇರಪ್ಪ ಹಾಗೂ ಲವೀಶ್ ಕೌಶಲ್ ತಲಾ 2 ವಿಕೆಟ್ ಪಡೆದು ಗುಲ್ಬರ್ಗಾ ತಂಡವನ್ನು ಕಾಡಿದರು.