ಬೆಂಗಳೂರು :ಕೆಎಲ್ ಶ್ರೀಜಿತ್ ಅರ್ಧಶತಕ ಮತ್ತು ಮನ್ವಂತ್ ಕುಮಾರ್ ಆಲ್ರೌಂಡ್ ಆಟದ ನೆರವಿನಿಂದ ಶಿವಮೊಗ್ಗ ಲಯನ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್, ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಹಂತ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ಪವರ್ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿ ಸಾಧಾರಣ ಆರಂಭ ಪಡೆಯಿತು. ಹುಬ್ಬಳ್ಳಿ ಪರ ಮೂರನೇ ಓವರ್ ಎಸೆದ ಸಂತೋಖ್ ಸಿಂಗ್ ಸತತ ಎಸೆತಗಳಲ್ಲಿ ನಿಹಾಲ್ ಉಲ್ಲಾಳ್ (9) ಮತ್ತು ವಿನಯ್ ಸಾಗರ್ (0) ವಿಕೆಟ್ ಕಿತ್ತರು. ಉತ್ತಮ ಬ್ಯಾಟಿಂಗ್ ತೋರುತ್ತಿದ್ದ ರೋಹನ್ ಕದಮ್ (17) ರನೌಟ್ಗೆ ಬಲಿಯಾದರು.
ರೋಹಿತ್ ಕುಮಾರ್ (18) ರನ್ ಗಳಿಸಿ ಹತ್ತನೇ ಓವರ್‌ನಲ್ಲಿ ಪ್ರವೀಣ್ ದುಬೆಗೆ ವಿಕೆಟ್ ಒಪ್ಪಿಸಿದರು. ಅಭಿನವ್ ಮನೋಹರ್ (1) ಮತ್ತು ಪ್ರಣವ್ ಭಾಟಿಯಾ (0) ಹುಬ್ಬಳ್ಳಿ ತಂಡದ ಅನುಭವಿ ಸ್ಪಿನ್ನರ್ ಕೆ.ಸಿ ಕಾರಿಯಪ್ಪಗೆ ಬಲಿಯಾದರು. ಆದರೆ, ಕೆಳ ಕ್ರಮಾಂಕದಲ್ಲಿ ಕ್ರಾಂತಿ ಕುಮಾರ್ (34) ನಾಯಕ ಶ್ರೇಯಸ್ ಗೋಪಾಲ್ 31 ರನ್ ಗಳಿಸುವ ಮೂಲಕ, 38 ಎಸೆತಗಳಲ್ಲಿ 44 ರನ್‌ಗಳ ಜೊತೆಯಾಟವಾಡಿದರು. ಅಂತಿಮವಾಗಿ ಶಿವಮೊಗ್ಗ 20 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟ್ ಆಯಿತು. ಹುಬ್ಬಳ್ಳಿ ಪರ ಕೆ.ಸಿ ಕಾರಿಯಪ್ಪ (2/17), ಮನ್ವಂತ್ ಕುಮಾರ್ (2/20) ಮತ್ತು ಸಂತೋಖ್ ಸಿಂಗ್ (2/26) ತಲಾ ಎರಡು ವಿಕೆಟ್ ಪಡೆದರು.
ಸಾಧಾರಣ ಗುರಿ ಪಡೆದ ಹುಬ್ಬಳ್ಳಿ ಟೈಗರ್ಸ್ ಸಹ ಉತ್ತಮ ಆರಂಭ ಪಡೆಯಲಿಲ್ಲ. ಎಂ.ಬಿ. ಶಿವಂ (0) ಮೊಹಮ್ಮದ್ ತಾಹಾ (12) ರನ್ ಗಳಿಸಿ ಶಿವಮೊಗ್ಗ ಲಯನ್ಸ್ ನಾಯಕ ಶ್ರೇಯಸ್ ಗೋಪಾಲ್ಗೆ ವಿಕೆಟ್ ಒಪ್ಪಿಸಿದರು. ನಾಗ ಭರತ್ (0) ಮತ್ತು ಮನೀಶ್ ಪಾಂಡೆ (3) ಸಹ ನಿರಾಸೆ ಮೂಡಿಸಿ ಪೆವಿಲಿಯನ್ ಸೇರಿದರು. ಆದರೆ ಇನ್ನೊಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದ ಕೆ.ಎಲ್ ಶ್ರೀಜಿತ್ ಅರ್ಧಶತಕ ದಾಖಲಿಸಿ ಮಿಂಚಿದರು. ಪ್ರವೀಣ್ ದುಬೆ (18) ರನ್ ಗಳಿಸುವ ಮೂಲಕ ಶ್ರೀಜಿತ್ಗೆ ಕೊಂಚ ಹೊತ್ತು ಬೆಂಬಲವಾಗಿ ನಿಂತರು.