ಬೆಂಗಳೂರು :ಆರಂಭಿಕ ಆಟಗಾರ ಎಲ್.ಆರ್. ಚೇತನ್ ಹಾಗೂ ಮಧ್ಯಮ ವೇಗಿ ಅಭಿಲಾಶ್ ಶೆಟ್ಟಿ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ಮಿಸ್ಟಿಕ್ಸ್ ತಂಡವು ದ್ವಿತೀಯ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ತಂಡದ ಪರ ಅಭಿಲಾಶ್ ಶೆಟ್ಟಿ 17 ರನ್ಗೆ 3 ಹಾಗೂ ಶರಣ್ ಗೌಡ 24ಕ್ಕೆ 2 ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದರೆ, ಆರಂಭಿಕ ಬ್ಯಾಟರ್ ಎಲ್.ಆರ್.ಚೇತನ್ 36 (24 ಎಸೆತ) ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಬ್ಲಾಸ್ಟರ್ಸ್ ಆರಂಭಿಕರಾದ ಡಿ.ನಿಶ್ಚಲ್ 1 ರನ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಅವರನ್ನು 4 ರನ್ಗೆ ಔಟ್ ಮಾಡುವ ಮೂಲಕ ಮಿಸ್ಟಿಕ್ಸ್ ವೇಗಿ ಅಭಿಲಾಶ್ ಶೆಟ್ಟಿ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಜೆಶ್ವಂತ್ ಆಚಾರ್ಯ 29 ಹಾಗೂ ಸೂರಜ್ ಅಹುಜಾ 62* ರನ್ ಗಳಿಸುವ ಮೂಲಕ ಬ್ಲಾಸ್ಟರ್ಸ್ ತಂಡ 29 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 137 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಮಿಸ್ಟಿಕ್ಸ್ ತಂಡಕ್ಕೆ ಆರಂಭಿಕರಾದ ಎಲ್.ಆರ್.ಚೇತನ್ (36) ಆದರ್ಶ್ ಪ್ರಜ್ವಲ್ (31) ಭದ್ರ ಬುನಾದಿ ಹಾಕಿದರು. ಬ್ಲಾಸ್ಟರ್ಸ್ ಪರ ದಾಳಿಗಿಳಿದ ಶುಭಾಂಗ್ ಹೆಗಡೆ ಚೇತನ್, ಆದರ್ಶ್ ಹಾಗೂ ಸ್ಮರಣ್ರನ್ನ ಒಬ್ಬರ ಹಿಂದೊಬ್ಬರಂತೆ ಔಟ್ ಮಾಡುವ ಮೂಲಕ ಬ್ಲಾಸ್ಟರ್ಟ್ಗೆ ಗೆಲುವಿನ ಆಸೆ ಚಿಗುರಿಸಿದರು. ಆದರೆ ಮಿಸ್ಟಿಕ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಕೆ.ವಿ ಅನೀಶ್ 29* ಹಾಗೂ ಅಮಿತ್ ವರ್ಮಾ 28 ರನ್ ಗಳಿಸುವ ಮೂಲಕ ಗೆಲುವು ತಂದಿತ್ತರು. ಅಂತಿಮವಾಗಿ ಆರು ವಿಕೆಟ್ ಬಾಕಿ ಇರುವಂತೆ ಮಿಸ್ಟಿಕ್ಸ್ ತಂಡ ಗೆಲುವಿನ ನಗೆ ಬೀರಿತು.