ಬೆಂಗಳೂರು :ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಐದನೇ ಜಯ ದಾಖಲಿಸಿದೆ. ಟೂರ್ನಿಯಲ್ಲಿ ಸತತ 8 ಪಂದ್ಯಗಳಲ್ಲಿ ಪರಾಜಯಗೊಂಡ ಬೆಂಗಳೂರು ತಂಡದ ನಿರಾಸೆ ಮುಂದುವರೆದಿದೆ.
ಗುಲ್ಬರ್ಗಾ ಮಿಸ್ಟಿಕ್ಸ್ - ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪಂದ್ಯ ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತ ಬೆಂಗಳೂರು ಬ್ಲಾಸ್ಟರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಅಭಿಲಾಷ್ ಶೆಟ್ಟಿ ಆರಂಭಿಕ ಭುವನ್ ರಾಜು (10) ವಿಕೆಟ್ ಪಡೆದರೆ, ಶರಣ್ ಗೌಡ್ ನಾಯಕ ಮಯಾಂಕ್ ಅಗರ್ವಾಲ್ (15) ವಿಕೆಟ್ ಪಡೆದರು. ಆರಂಭಿಕ ಆಘಾತದಿಂದಾಗಿ ಬೆಂಗಳೂರು ಬ್ಲಾಸ್ಟರ್ಸ್ ಪಂದ್ಯಾವಳಿಯ ಅತ್ಯಂತ ಕಡಿಮೆ ಪವರ್‌ಪ್ಲೇ ಮೊತ್ತ (31/2) ದಾಖಲಿಸಿತು.
ಮೂರನೇ ಕ್ರಮಾಂಕದಲ್ಲಿ ಬಂದ ಡಿ. ನಿಶ್ಚಲ್ ಕೊಂಚ ಹೊತ್ತು ಆಸರೆಯಾದರು. ಆದರೆ, ಲೋಚನ್ ಅಪ್ಪಣ್ಣ (3), ಶುಭಾಂಗ್ ಹೆಗ್ಡೆ (8) ಮತ್ತು ಸೂರಜ್ ಅಹುಜಾ (15) ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. 18ನೇ ಓವರ್‌ನಲ್ಲಿ ತಂಡದ ಮೊತ್ತ 104ಕ್ಕೆ 7 ವಿಕೆಟ್ ಆಗಿದ್ದಾಗ ರನೌಟ್ ಆಗುವ ಮೂಲಕ ಕ್ರೀಸ್‌ನಲ್ಲಿ ಡಿ.ನಿಶ್ಚಲ್ (36) ಆಟ ಕೊನೆಗೊಂಡಿತು. ಕೆಳ ಕ್ರಮಾಂಕದಲ್ಲಿ ಅಮನ್ ಖಾನ್ ಕೇವಲ 11 ಎಸೆತಗಳಲ್ಲಿ ನಿರ್ಣಾಯಕ 18 ರನ್ ಬಾರಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ 19.3 ಓವರ್‌ಗಳಲ್ಲಿ 113 ರನ್‌ಗಳಿಗೆ ಬೆಂಗಳೂರು ಬ್ಲಾಸ್ಟರ್ಸ್ ಇನ್ನಿಂಗ್ಸ್ ಕೊನೆಗೊಂಡಿತು.
ಗುಲ್ಬರ್ಗಾ ಮಿಸ್ಟಿಕ್ಸ್ - ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪಂದ್ಯ ಸುಲಭದ ಮೊತ್ತ ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಸಹ ಆರಂಭಿಕ ಆಘಾತ ಅನುಭವಿಸಿತು. ಎರಡನೇ ಓವರ್‌ನಲ್ಲೇ ಆದರ್ಶ್ ಪ್ರಜ್ವಲ್ (4) ಅವರು ಎಲ್.ಆರ್. ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಚೇತನ್ 18 ಮತ್ತು ಮ್ಯಾಕ್ನೈಲ್ ನೊರೊನ್ಹಾ 28 ರನ್ ಗಳಿಸುವ ಮೂಲಕ ಪವರ್‌ಪ್ಲೇ ಅಂತ್ಯದ ವೇಳೆಗೆ ಮಿಸ್ಟಿಕ್ಸ್ ಮೊತ್ತವು 1 ವಿಕೆಟ್ 47 ರನ್ ತಲುಪಲು ನೆರವಾದರು. ನಂತರದಲ್ಲಿ ಗುಲ್ಬರ್ಗಾ ಸತತ ಎಸೆತಗಳಲ್ಲಿ ಚೇತನ್ ಮತ್ತು ಮ್ಯಾಕ್ನೈಲ್ ನೊರೊನ್ಹಾ ವಿಕೆಟ್ ಕಳೆದುಕೊಂಡಿತು. ಆದರೆ, ಸ್ಮರನ್ ಆರ್. 29 ಮತ್ತು ಕೆ.ವಿ. ಅನೀಶ್ 17 ರನ್ ಗಳಿಸುವ ಮೂಲಕ 46 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು. ಅಂತಿಮವಾಗಿ ಅಮಿತ್ ವರ್ಮಾ 11* ಮತ್ತು ಶ್ರೀನಿವಾಸ್ ಶರತ್ 2* ರನ್ ಗಳಿಸಿ ಅಜೇಯರಾಗುಳಿಯುವ ಮೂಲಕ ಗುಲ್ಬರ್ಗಾ 14.5 ಓವರ್‌ಗಳಲ್ಲಿ 5 ವಿಕೆಟ್ ಅಂತರದಿಂದ ಪಂದ್ಯ ಗೆದ್ದು ಬೀಗಿತು.
ಗುಲ್ಬರ್ಗಾ ಮಿಸ್ಟಿಕ್ಸ್ - ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪಂದ್ಯ ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಬ್ಲಾಸ್ಟರ್ಸ್ - 113/10 (19.3); ಡಿ.ನಿಶ್ಚಲ್ - 36 (33), ಅಮನ್ ಖಾನ್ - 18 (11)
ಅಭಿನಾಶ್ ಶೆಟ್ಟಿ - 19 ರನ್ಗೆ 3 ವಿಕೆಟ್, ಅವಿನಾಶ್ ಡಿ. -22ಕ್ಕೆ 3
ಗುಲ್ಬರ್ಗಾ ಮಿಸ್ಟಿಕ್ಸ್ – 114-5 (14.5); ಸ್ಮರನ್ ಆರ್ – 29 ರನ್ (17), ಮ್ಯಾಕ್ನೈಲ್ ನೊರೊನ್ಹಾ – 28 (21),
ಎಲ್.ಆರ್. ಕುಮಾರ್ – 12 ರನ್ಗೆ 1 ವಿಕೆಟ್, ಶುಭಾಂಗ್ ಹೆಗ್ಡೆ 28ಕ್ಕೆ 1
ಇದನ್ನೂ ಓದಿ:ಮಹಾರಾಜ ಟ್ರೋಫಿ: ಮಂಗಳೂರು ಡ್ರ್ಯಾಗನ್ಸ್ಗೆ 15 ರನ್‌ಗಳ ಜಯ