ಬೆಂಗಳೂರು:ಉತ್ತಮ ಬ್ಯಾಟಿಂಗ್ ಹಾಗೂ ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 172 ಸವಾಲಿನ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್‌ಗೆ 169 ರನ್ ಗಳಿಸಿ 2 ರನ್‌ಗಳ ಅಂತರದಲ್ಲಿ ಸೋಲು ಕಂಡಿತು. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಕ್ರಿಕೆಟ್ 2022 ಲೀಗ್ ಪಂದ್ಯದಲ್ಲಿ 172 ರನ್‌ಗಳ ಕಠಿಣ ಗುರಿ ಪಡೆದ ಟೈಗರ್ಸ್ ಕೊನೆಯ ಕ್ಷಣದಲ್ಲಿ ತಡವರಿಸಿ ಸೋಲಿಗೆ ಶರಣಾಗುವಂತಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಆರಂಭ ಉತ್ತಮವಾಗಿರಲಿಲ್ಲ. ಲೋಚನ್ ಗೌಡ 6, ನಾಯಕ ಮಯಾಂಕ್ ಅಗರ್ವಾಲ್ 12 ರನ್ ಗಳಿಸಿ ಔಟಾದರು. ಬಳಿಕ ಬಂದ ಶಿವಕುಮಾರ್ ರಕ್ಷಿತ್ ಅರ್ಧಶತಕ (50) ಸಿಡಿಸಿ ತಂಡಕ್ಕೆ ನೆರವಾದರು. ಅನಿರುಧ್ ಜೋಶಿ 33 ರನ್ ಮಾಡಿದರು. ಕುಶ್ ಮರಾಟೆ 23 ರನ್ ಕಾಣಿಕೆ ನೀಡಿದರು. ಈ ಮೂಲಕ ತಂಢ ಹುಬ್ಬಳ್ಳಿಗೆ 171 ರನ್‌ಗಳ ಕಠಿಣ ಸವಾಲು ನೀಡಿತು. ಹುಬ್ಬಳ್ಳಿ ಟೈಗರ್ಸ್ ಪರವಾಗಿ ಶರಣ್ ಗೌಡ 3, ಬಿಯು ಶಿವಕುಮಾರ್ 2 ವಿಕೆಟ್ ಪಡೆದು ಮಿಂಚಿದರು.
ಹುಬ್ಬಳ್ಳಿ ಟೈಗರ್ಸ್ಗೆ ಕೈಕೊಟ್ಟ ಅದೃಷ್ಟ:172 ರನ್‌ಗಳ ಸವಾಲು ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡ ಮೊಹಮ್ಮದ್ ತಾಹ ಅವರ ಅದ್ಭುತ ಪ್ರದರ್ಶನದಿಂದ ಗೆಲುವಿನ ಅಂಚಿಗೆ ಬಂದಿತ್ತು. ತಾಹ 47 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಮೇತ 71 ರನ್ ಸಿಡಿಸಿದರು. ಆರಂಭಿಕರಾದ ಲವ್ನೀತ್ ಸಿಸೋಡಿಯಾ 15, ಶಿವಕುಮಾರ್ 17, ಲಿಯಾನ್ ಖಾನ್ 18, ತುಷಾರ್ ಸಿಂಗ್ 25 ರನ್ ಬಾರಿಸಿದರು. ಉತ್ತಮವಾಗಿ ಬ್ಯಾಟ್ ಮಾಡಿದ ಬೌಲರ್ ಅಭಿಮನ್ಯು ಮಿಥುನ್ ಕೊನೆಯಲ್ಲಿ ರನೌಟ್ ಆಗಿ ತಂಡ 2 ರನ್‌ಗಳ ಸೋಲು ಕಂಡಿತು.