ಬೆಂಗಳೂರು:ಚಿನ್ನಸ್ವಾಮಿ ಅಂಗಣದಲ್ಲಿ ಮಂಗಳವಾರ ನಡೆದ ಮಹಾರಾಜ ಕಪ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ನಾಯಕ ಮಯಾಂಕ್ ಅಗರ್ವಾಲ್ ಶತಕ ಮತ್ತು ಎಲ್.ಆರ್. ಚೇತನ್ರ ಅರ್ಧಶತಕದ ಬಲದಿಂದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 44 ರನ್ಗಳ ಜಯ ಗಳಿಸಿ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್ ತಲುಪಿತು. ಇನ್ನೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಸೋತ ಹುಬ್ಬಳ್ಳಿ ಟೈಗರ್ಸ್ ಟೂರ್ನಿಯಿಂದ ಹೊರಬಿದ್ದಿದೆ.
ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಾಯಕ ಮಯಾಂಕ್ ಅಗರ್ವಾಲ್ರ ಅಬ್ಬರದ ಶತಕ (112) ಮತ್ತು ಚೇತನ್ (88) ಅರ್ಧಶತಕದಿಂದಾಗಿ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್ಗಳ ಬೃಹತ್ ಮೊತ್ತ ಪೇರಿಸಿತು. ಕೊನೆಯಲ್ಲಿ ಅನಿರುದ್ಧ್ ಜೋಶಿ 20 ರನ್ ಚಚ್ಚಿದರು.
ಬೃಹತ್ ಮೊತ್ತ ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೆ, ರೋಹನ್ ಪಾಟೀಲ್ ಗಟ್ಟಿಯಾಗಿ ನೆಲೆಯೂರಿ 108 ರನ್ ಗಳಿಸಿದರು. ಏಕಾಂಗಿಯಾಗಿ ಹೋರಾಟ ನಡೆಸಿದ ಪಾಟೀಲ್ ಶತಕಕ್ಕೆ ಗೆಲುವು ಮಾತ್ರ ಧಕ್ಕಲಿಲ್ಲ. 44 ರನ್ಗಳಿಂದ ಗೆಲುವು ಕಂಡ ಬೆಂಗಳೂರು ತಂಡ ಫೈನಲ್ ತಲುಪಿತು.
ಟೂರ್ನಿಯಲ್ಲೇ ಅತ್ಯಧಿಕ ಮೊತ್ತ:ಬೆಂಗಳೂರು ಬ್ಲಾಸ್ಟರ್ಸ್ ತಂಡ ಗಳಿಸಿದ 227 ರನ್ಗಳು ಮಹಾರಾಜ ಟ್ರೋಫಿಯಲ್ಲೇ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿದೆ. ಅಂತಾರಾಷ್ಟ್ರೀಯ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 61 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 112 ರನ್ ಗಳಿಸಿ ಟೂರ್ನಿಯಲ್ಲಿ ವೈಯಕ್ತಿಕ ಎರಡನೇ ಶತಕ ದಾಖಲಿಸಿದರು.