ಮೈಸೂರು: ಮನೀಶ್ ಪಾಂಡೆ ಆಕರ್ಷಕ ಅರ್ಧಶತಕ ಮತ್ತು ಕೋದಂಡ ಅಜಿತ್ ಕಾರ್ತಿಕ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಮಹಾರಾಜ ಟ್ರೋಫಿಯ ತನ್ನ ಎರಡನೇ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 3 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶಿವಮೊಗ್ಗ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.
176 ರನ್‌ಗಳ ಬೃಹತ್ ಮೊತ್ತ ಬೆಂಬತ್ತಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಡಿ.ಅವಿನಾಶ್ ಬೌಲಿಂಗ್ ದಾಳಿಗೆ ಸಿಲುಕಿ ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಸ್ವತ್ ಆಚಾರ್ಯ (30) ಹಾಗೂ ರೋಹನ್ ಪಾಟೀಲ್ (28) ಉತ್ತಮ ಆರಂಭ ಒದಗಿಸಿದರು. ಆದರೆ ಭರವಸೆಯ ಆಟಗಾರ ದೇವದತ್ತ ಪಡಿಕ್ಕಲ್ 9 ರನ್ ಗಳಿಸಿ ನಿರ್ಗಮಿಸಿದಾಗ ಗುಲ್ಬರ್ಗ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮನೀಶ್ ಪಾಂಡೆ 36 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 50 ರನ್ ಗಳಿಸಿ ಜಯದ ಹಾದಿ ತೋರಿಸಿದರು.
ಅಂತಿಮ ಕ್ಷಣದಲ್ಲಿ ಕೋದಂಡ ಅಜಿತ್ ಕಾರ್ತಿಕ್ ಕೇವಲ 9 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಅಜೇಯ 22 ರನ್ ಕಲೆ ಹಾಕಿ ಇನ್ನೂ 5 ಎಸೆತ ಬಾಕಿ ಇರುವಾಗಲೇ ಜಯ ತಂದಿಟ್ಟರು. ಶಿವಮೊಗ್ಗ ಪರ ಡಿ.ಅವಿನಾಶ್ 40 ರನ್‌ಗೆ 5 ವಿಕೆಟ್ ಗಳಿಸಿದ್ದು ಪ್ರಯೋಜವಾಗಲಿಲ್ಲ.
ರೋಹನ್, ಸಿದ್ಧಾರ್ಥ್ ಶತಕದ ಜೊತೆಯಾಟ:ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶಿವಮೊಗ್ಗ ಸ್ಟ್ರೈಕರ್ಸ್ ಪರ ರೋಹನ್ ಕದಮ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ 108 ರನ್ ಜೊತೆಯಾಟ ಮೂಲಕ ಶಿವಮೊಗ್ಗ ತನ್ನ ಎರಡನೇ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಆರಂಭಿಕ ಆಟಗಾರ ಸ್ಟಾಲಿನ್ ಹೂವರ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆದರೆ ರೋಹನ್ ಹಾಗೂ ಸಿದ್ಧಾರ್ಥ್ ಅವರ ಜೊತೆಯಾಟ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ತಾಳ್ಮೆ ಕೆಡಿಸುವಂತೆ ಮಾಡಿತು. ರೋಹನ್ 41 ಎಸೆತಗಳನ್ನೆದುರಿಸಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿ ಅರ್ಧಶತಕ ಪೂರ್ಣಗೊಳಿಸಿದರು. ಸಿದ್ಧಾರ್ಥ್, ತಾಳ್ಮೆಯಲ್ಲಿ 51 ಎಸೆತಗಳನ್ನೆದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಟೂರ್ನಿ ಮೊದಲ ಅರ್ಧ ಶತಕ ಪೂರ್ಣಗೊಳಿಸಿದರು.