ಬೆಂಗಳೂರು:88 ವರ್ಷಗಳ ಇತಿಹಾಸವಿರುವ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ಹೊಸದೊಂದು ಇತಿಹಾಸ ರಚಿಸಿದೆ. 41 ಬಾರಿಯ ಚಾಂಪಿಯನ್, ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ಮಧ್ಯಪ್ರದೇಶ ರಣಜಿ ಚಾಂಪಿಯನ್ ಆಗಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತನ್ನ ತನ್ನೆಲ್ಲಾ ಬಲ ಪ್ರಯೋಗಿಸಿದರೂ, ಮಧ್ಯಪ್ರದೇಶದ ಮುಂದೆ ಶರಣಾಗಿದೆ. ಪ್ರತಿ ವರ್ಷವೂ ರಣಜಿ ಟೂರ್ನಿ ಗೆಲ್ಲುವ ಫೇವರೇಟ್ ತಂಡವಾದ ಮುಂಬೈ ಅನ್ನು ಇದೇ ಮೊದಲ ಬಾರಿಗೆ ಮಧ್ಯಪ್ರದೇಶ ತಂಡ ಅದರ ಎಲ್ಲಾ ತಂತ್ರಗಳನ್ನು ತಲೆಕೆಳಗೆ ಮಾಡಿದೆ.
23 ವರ್ಷಗಳ ಬಳಿಕ ಫೈನಲ್, ಚಾಂಪಿಯನ್:ಮಧ್ಯಪ್ರದೇಶ ತಂಡ ರಣಜಿ ಟೂರ್ನಿಯ ಸಾಧನೆ ಅಷ್ಟಕ್ಕಷ್ಟೇ. 23 ವರ್ಷಗಳ ಹಿಂದೆ ಅಂದರೆ, 1998-99 ರಲ್ಲಿ ಚಂದ್ರಕಾಂತ್ ಪಂಡಿತ್ ನೇತೃತ್ವದಲ್ಲಿ ಫೈನಲ್ ಪ್ರವೇಶಿಸಿದ್ದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆ ಬಳಿಕ ಅಂದಿನಿಂದ 23 ವರ್ಷಗಳವರೆಗೆ ಮಧ್ಯಪ್ರದೇಶ ಫೈನಲ್ ತಲುಪಿರಲಿಲ್ಲ. 2022 ರ ಸಾಲಿನ ರಣಜಿಯಲ್ಲಿ ತಂಡ ಫೈನಲ್ ತಲುಪುವ ಮೂಲಕ ಮುಂಬೈ ತಂಡವನ್ನು ಸೋಲಿಸಿ ಚಾಂಪಿಯನ್ ಆಗುವ ಮೂಲಕ ಇತಿಹಾಸ ಬರೆದಿದೆ.
ರಾಷ್ಟ್ರೀಯ ತಂಡಕ್ಕೆ ಅದೆಷ್ಟೋ ಘಟಾನುಘಟಿ ಕ್ರಿಕೆಟಿಗರನ್ನು ನೀಡಿದ್ದ ಮುಂಬೈ ತಂಡ ಈ ಬಾರಿಯೂ ಚಾಂಪಿಯನ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಮುಂದೆ ತಂಡ ಖ್ಯಾತಿಗೆ ತಕ್ಕಂತೆ ಆಡುವಲ್ಲಿ ವಿಫಲವಾಯಿತು.
ನಡೆಯದ ಮುಂಬೈ ಆಟ:ಮೊದಲ ಇನಿಂಗ್ಸ್ನಲ್ಲಿ ಭರವಸೆಯ ಆಟಗಾರ ಸರ್ಫರಾಜ್ ಖಾನ್ ಶತಕ ಮತ್ತು ಯಶಸ್ವಿ ಜೈಸ್ವಾಲ್ ಅರ್ಧಶತಕ ಹೊರತಾಗಿ ಬೇರೆ ಆಟಗಾರರು ಹೆಚ್ಚಿನ ರನ್ ಗಳಿಸದ ಕಾರಣ 374 ಮೊತ್ತ ದಾಖಲಿಸಿತ್ತು. ಇದಕ್ಕುತ್ತರವಾಗಿ ಮಧ್ಯಪ್ರದೇಶ ತಂಡ ಭರ್ಜರಿ ಬ್ಯಾಟಿಂಗ್ ಮಾಡಿತು. ಯಶ್ ದುಬೆ, ಶುಭಂ ಶರ್ಮಾ, ರಜತ್ ಪಾಟೀದಾರ್ರ ತ್ರಿವಳಿ ಶತಕಗಳು, ಸರನ್ಶಾರ ಅರ್ಧಶತಕ ಬಲದಿಂದ ತಂಡ 536 ರನ್ ಗಳಿಸಿ ಮುಂಬೈ ಭಾರಿ ಪೆಟ್ಟು ನೀಡಿತು.