ಸೌತಾಂಪ್ಟನ್: ನಾಯಕ ವಿರಾಟ್ ಕೊಹ್ಲಿ ಮತ್ತು 3ನೇ ಕ್ರಮಾಂಕದ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಅವರನ್ನು ಕೇವಲ 2 ಓವರ್ಗಳ ಅಂತರದಲ್ಲಿ ಕಳೆದುಕೊಂಡಿದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ದೊಡ್ಡ ಹೊಡೆತ ನೀಡಿತು ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ಭಾರತದೆದುರು ಅದ್ಭುತ ಆಲ್ರೌಂಡ್ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್ ತಂಡವನ್ನು ವಿಶ್ವದ ಅತ್ಯುತ್ತಮ ತಂಡ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಅಭಿನಂದನೆಗಳು. ನಿಮ್ಮದು ಶ್ರೇಷ್ಠ ತಂಡ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಟೀಮ್ ಇಂಡಿಯಾ ತನ್ನ ಪ್ರದರ್ಶನದಿಂದ ನಿರಾಶೆಗೊಳಗಾಗಿದೆ. ನಾನು ಹೇಳಿದಂತೆ ಮೊದಲ 10 ಓವರ್ಗಳು ನಿರ್ಣಾಯಕವಾಗಿದ್ದವು ಮತ್ತು ಈ ಸಂದರ್ಭದಲ್ಲಿ ಕೇವಲ 10 ಎಸೆತಗಳ ಅಂತರದಲ್ಲಿ ಭಾರತ ಕೊಹ್ಲಿ ಮತ್ತು ಪೂಜಾರ ವಿಕೆಟ್ ಕಳೆದುಕೊಂಡಿದ್ದು ತಂಡದ ಮೇಲೆ ಒತ್ತಡ ತಂದಿತು ಎಂದು ಅವರು ತಿಳಿಸಿದ್ದಾರೆ.
ಪೂಜಾರ ಮತ್ತು ಕೊಹ್ಲಿ ವೇಗಿ ಜೆಮೀಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಕೊಹ್ಲಿ 35ಬನೇ ಓವರ್ನ 5ನೇ ಎಸೆತದಲ್ಲಿ ಔಟಾದರೆ, ಪೂಜಾರ 37ನೇ ಓವರ್ 3ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇವರಿಬ್ಬರ ನಂತರ ಬಂದವರಲ್ಲಿ ಪಂತ್ 41 ರನ್ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟ್ಸ್ಮನ್ 20ರ ಗಡಿ ದಾಟುವಲ್ಲಿ ವಿಫಲರಾದರು. ಅಲ್ಲದೆ ಈ ಪಂದ್ಯದಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್ಮನ್ ಅರ್ಧಶತಕ ಬಾರಿಸಲು ವಿಫಲರಾದರು.
ಭಾರತ ನೀಡಿದ 139 ರನ್ಗಳ ಗುರಿಯನ್ನು ಕಿವೀಸ್ 2 ವಿಕೆಟ್ ಕಳೆದುಕೊಂಡು ತಲುಪಿ ಚಾಂಪಿಯನ್ ಆಯಿತು.
ಇದನ್ನು ಓದಿ:ಹೆಸರು ಪ್ರಸ್ತಾಪಿಸದೆ ಈ ಆಟಗಾರನ ವಿರುದ್ಧ ಕೊಹ್ಲಿ ಪರೋಕ್ಷ ಅಸಮಾಧಾನ