ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ನ ನಾಲ್ಕನೇ ದಿನದ ಆರಂಭಕ್ಕೂ ಮುನ್ನ ಭಾರತ ಮಹಿಳಾ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ ಸಾಂಪ್ರದಾಯಿಕವಾಗಿ ಬೆಲ್ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಮೂಲಕ ವಿಶೇಷ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
'ದೀಪ್ತಿ ಶರ್ಮಾ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ನಾಲ್ಕನೇ ದಿನ ಆರಂಭಕ್ಕೂ ಮುನ್ನ ಲಾರ್ಡ್ಸ್ನಲ್ಲಿ ಸಾಂಪ್ರದಾಯಿಕ' ಬೆಲ್ ಬಾರಿಸಿದ್ದಾರೆ ಎಂದು ಬಿಸಿಸಿಐ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
ಸೀಮಿತ ಓವರ್ಗಳಲ್ಲಿ ವಿಶ್ವದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ದೀಪ್ತಿ ಶರ್ಮಾ, ಈ ವರ್ಷ ಇಂಗ್ಲೆಂಡ್ ವಿರುದ್ಧ ಬ್ರಿಸ್ಟಲ್ನಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ್ದರು. 2ನೇ ಇನ್ನಿಂಗ್ಸ್ನಲ್ಲಿ 54 ರನ್ ಬಾರಿಸುವ ಮೂಲಕ ಭಾರತ ತಂಡ ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಚೊಚ್ಚಲ ದಿ ಹಂಡ್ರೆಡ್ ಲೀಗ್ನಲ್ಲಿ ಲಂಡನ್ ಸ್ಪಿರಿಟ್ ತಂಡದ ಪರ ಆಡುತ್ತಿದ್ದಾರೆ. ಅವರು ಒಟ್ಟು 7 ಪಂದ್ಯಗಳಲ್ಲಿ 77 ರನ್ ಮತ್ತು 8 ವಿಕೆಟ್ ಪಡೆದಿದ್ದಾರೆ.
ಪ್ರಸ್ತುತ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಪುರುಷರ ಟೆಸ್ಟ್ ಪಂದ್ಯದಲ್ಲಿ ಬೆಲ್ ಬಾರಿಸಿದ 2ನೇ ಭಾರತೀಯೆ ಎನಿಸಿಕೊಂಡಿದ್ದಾರೆ. 3ನೇ ದಿನ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಬೆಲ್ ಬಾರಿಸಿದ್ದರು.