ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಸಮರಕ್ಕೆ ಕೇವಲ 4 ದಿನಗಳಷ್ಟೇ ಬಾಕಿ. ಕ್ರಿಕೆಟ್ ಧರ್ಮವೆಂಬ ರಾಷ್ಟ್ರವಾದ ಭಾರತದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪ್ರತಿಷ್ಟಿತ ಸರಣಿ ಆಯೋಜನೆಗೊಳ್ಳುತ್ತಿದೆ. ವಿಶ್ವಾದ್ಯಂತ ಇರುವ ಕ್ರಿಕೆಟ್‌ಪ್ರೇಮಿಗಳ ದೃಷ್ಟಿ ಭಾರತದತ್ತ ನೆಟ್ಟಿದೆ. ಈ ಬಾರಿಯ ವಿಶ್ವಕಪ್‌ನ 5 ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನವೂ ಆತಿಥ್ಯವಹಿಸುತ್ತಿದೆ. ಈ ಸಂದರ್ಭದಲ್ಲಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಆಟಗಾರರ ವಿವರ ತಿಳಿಯೋಣ.
ಜಿ.ಆರ್.ವಿಶ್ವನಾಥ್, ಬಿ.ಎಸ್.ಚಂದ್ರಶೇಖರ್, ಬ್ರಿಜೇಶ್ ಪಟೇಲ್, ಸೈಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ, ಸುನೀಲ್ ಜೋಶಿ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ರಾಬಿನ್ ಉತ್ತಪ್ಪ, ವಿನಯ್ ಕುಮಾರ್, ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್ ಸೇರಿದಂತೆ ಅನೇಕ ಆಟಗಾರರು ರಾಷ್ಟ್ರೀಯ ತಂಡದಲ್ಲಿ ತಮ್ಮದೇ ರೀತಿಯ ಸಾಧನೆಗೈದಿದ್ದಾರೆ. ವಿಶ್ವಕಪ್ ವಿಚಾರದಲ್ಲಿಯೂ ಕರ್ನಾಟಕದ ಆಟಗಾರರ ಕೊಡುಗೆ ಅಪಾರ. ಇದುವರೆಗೆ ನಡೆದ ಹನ್ನೆರಡು ವಿಶ್ವಕಪ್ ಸರಣಿಗಳ ಪೈಕಿ ಹನ್ನೊಂದು ಸರಣಿಗಳಲ್ಲಿ ಕರ್ನಾಟಕದ ಆಟಗಾರರು ಭಾರತ ತಂಡಕ್ಕಾಗಿ ಕೊಡುಗೆ ನೀಡಿದ್ದಾರೆ.
1975ರಲ್ಲಿ ಚೊಚ್ಚಲ ಆವೃತ್ತಿಯ ವಿಶ್ವಕಪ್ ಸರಣಿಗೆ ಕ್ರಿಕೆಟ್ ಜನಕರ ನಾಡೆಂದೇ ಕರೆಸಿಕೊಳ್ಳುವ ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. ಶ್ರೀನಿವಾಸನ್ ವೆಂಕಟರಾಘವನ್ ನೇತೃತ್ವದ ಭಾರತ ತಂಡದಲ್ಲಿ ಕನ್ನಡಿಗರಾದ ಬ್ರಿಜೇಶ್ ಪಟೇಲ್, ಜಿ.ಆರ್.ವಿಶ್ವನಾಥ್ ಹಾಗೂ ಸೈಯ್ಯದ್ ಕಿರ್ಮಾನಿ ವಿಶ್ವಕಪ್ ತಂಡದಲ್ಲಿ ಆಡಿದ್ದರು. ಇಂಗ್ಲೆಂಡ್‌ನಲ್ಲಿ 1979ರಲ್ಲಿ ಆಯೋಜನೆಯಾದ ದ್ವಿತೀಯ ಆವೃತ್ತಿಯ ವಿಶ್ವಕಪ್‌ನಲ್ಲಿಯೂ ಶ್ರೀನಿವಾಸನ್ ವೆಂಕಟರಾಘವನ್ ತಂಡದ ನೇತೃತ್ವ ವಹಿಸಿದ್ದರು. ಕನ್ನಡಿಗರಾದ ಬ್ರಿಜೇಶ್ ಪಟೇಲ್ ಹಾಗೂ ಜಿ.ಆರ್.ವಿಶ್ವನಾಥ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರು.
ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಆತಿಥ್ಯದ ನಡೆದ 1983ರ ಮೂರನೇ ವಿಶ್ವಕಪ್ ಸರಣಿ ಭಾರತೀಯ ಕ್ರಿಕೆಟ್‌ಗೆ ಮಹತ್ವದ ತಿರುವು ಎಂದೇ ಹೇಳಬಹುದು. ಅಂಡರ್ ಡಾಗ್ಸ್ಗಳೆಂದೇ ಬಿಂಬಿತವಾಗಿ ಟೂರ್ನಿ ಪ್ರವೇಶಿಸಿದ್ದ ಕಪಿಲ್ ದೇವ್ ನೇತೃತ್ವದ ಭಾರತ, ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಶಾಕ್ ನೀಡಿ ವಿಶ್ವ ಚಾಂಪಿಯನ್ ಆಗಿತ್ತು. ರೋಜರ್ ಬಿನ್ನಿ ಹಾಗೂ ಸೈಯ್ಯದ್ ಕಿರ್ಮಾನಿ ತಂಡದಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗರು. ಮಾತ್ರವಲ್ಲದೇ 8 ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದ ರೋಜರ್ ಬಿನ್ನಿ, ಟೂರ್ನಿಯ ಅತ್ಯುತ್ತಮ ಬೌಲರ್ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
1987ರಲ್ಲಿ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ವಿಶ್ವಕಪ್ ಸರಣಿ ಆಯೋಜಿಸಿದ್ದವು. ಟೂರ್ನಿಯಲ್ಲಿ ಭಾರತ ತಂಡವನ್ನು ಕಪಿಲ್ ದೇವ್ ಮುನ್ನಡೆಸಿದ್ದರು. ರೋಜರ್ ಬಿನ್ನಿ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ. ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಭಾರತ 1992ರ ವಿಶ್ವಕಪ್‌ಗೆ ಪ್ರವೇಶಿಸಿತ್ತು. ವೇಗಿ ಜಾವಗಲ್ ಶ್ರೀನಾಥ್ ತಂಡದಲ್ಲಿ ಏಕೈಕ ಕನ್ನಡಿಗನಾಗಿ ಸ್ಥಾನ ಪಡೆದಿದ್ದರು.
ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಕನ್ನಡಿಗರ ಪಾರಮ್ಯ ಮರಳಿದ್ದು 1996ರ ವೇಳೆಗೆ. ಎರಡನೇ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮೊಹಮ್ಮದ್ ಅಜರುದ್ದೀನ್ ಮುನ್ನಡೆಸಿದ್ದರು. ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಹಾಗೂ ಜಾವಗಲ್ ಶ್ರೀನಾಥ್ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗರಾಗಿದ್ದರು. 7 ಪಂದ್ಯಗಳಿಂದ 15 ವಿಕೆಟ್ ಪಡೆದು ಮಿಂಚಿದ್ದ ಅನಿಲ್ ಕುಂಬ್ಳೆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರು.