ನವದೆಹಲಿ:ವಿರಾಟ್ ಕೊಹ್ಲಿ ಅವರ ಕ್ಯಾಪ್ಟನ್‌ಶಿಪ್ ಸಂದರ್ಭದಿಂದ ಭಾರತ ಕ್ರಿಕೆಟ್ ತಂಡದಲ್ಲಿ ಯೋ-ಯೋ ಟೆಸ್ಟ್ ಆರಂಭಿಸಲಾಯಿತು. ನಂತರದಲ್ಲಿ ತಂಡ ಪ್ರತಿನಿಧಿಸುವ ಆಟಗಾರರ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸಲಾಯಿತು. ಅದರಂತೆ, ತಂಡದಲ್ಲಿ ಆಡಲು ಯೋ-ಯೋ ಟೆಸ್ಟ್ ಪಾಸ್ ಆಗುವುದನ್ನು ಕಡ್ಡಾಯಗೊಳಿಸಲಾಗಿದೆ. ಆಟಗಾರರನ್ನು ಸದೃಢವಾಗಿಡಲು ಈ ನಿಯಮಗಳು ಅತಿ ಅಗತ್ಯವೆಂದು ಪರಿಗಣಿಸಲಾಗುತ್ತಿದೆ. ಇದರ ಪರಿಣಾಮ, ಭಾರತೀಯ ಆಟಗಾರರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
ಏಷ್ಯಾಕಪ್ ತಯಾರಿಯಲ್ಲಿರುವ ಭಾರತ ತಂಡದ ಆಟಗಾರರಿಗೆ ಯೋ-ಯೋ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶುಭ್‌ಮನ್ ಗಿಲ್ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಈ ಟೂರ್ನಿಗೆ ಆಯ್ಕೆಯಾದ ಆಟಗಾರರೆಲ್ಲರೂ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಿಗದಿಪಡಿಸಿದ್ದ ಅರ್ಹತಾ ಅಂಕವನ್ನು (16.5) ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ತಂಡಕ್ಕೆ ಆಯ್ಕೆಯಾಗಿ ನಂತರ ಯೋ-ಯೋ ಪರೀಕ್ಷೆಯಲ್ಲಿ ಫೇಲ್ ಆಗುವ ಮೂಲಕ ಸ್ಥಾನ ಕಳೆದುಕೊಂಡ ಹಲವರಿದ್ದಾರೆ. ಈ ಪೈಕಿ ಕೆಲವು ಆಟಗಾರರು ದೇಶೀ ಸೀಸನ್ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು. ಆದರೆ ನಂತರ ಫಿಟ್ನೆಸ್ ಕಾಪಾಡಿಕೊಳ್ಳಲು ವಿಫಲರಾಗಿದ್ದಕ್ಕೆ ಯೋ-ಯೋ ಟೆಸ್ಟ್‌ನಲ್ಲಿ ಫೇಲ್ ಆಗಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಅಂತಹ ಆಟಗಾರರು ಇವರು.
ಅಂಬಟಿ ರಾಯುಡು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)- 2018ರಲ್ಲಿ ಅಂಬಟಿ ರಾಯುಡು ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದಾಗಿ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಅವಕಾಶವೂ ಸಿಕ್ಕಿತ್ತು. ಆದರೆ ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾದರು. ಹೀಗಾಗಿ ತಂಡದಿಂದ ಹೊರಗಿಡಲಾಯಿತು. ನಂತರ ಅವರ ಸ್ಥಾನಕ್ಕೆ ಸುರೇಶ್ ರೈನಾ ಆಯ್ಕೆಯಾದರು. ದೇಹ ದಂಡಿಸಿ ಯೋ-ಯೋ ಪರೀಕ್ಷೆ ಪಾಸ್ ಆದ ರಾಯುಡು 2018ರ ಏಷ್ಯಾಕಪ್ನಲ್ಲಿ ಸ್ಥಾನ ಪಡೆದುಕೊಂಡರು.