ಕೋಲ್ಕತ್ತಾ :ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಬಗ್ಗೆ ಮಾತನಾಡಲು ನಿರಾಕರಿಸುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಅವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಎಲ್ಲವೂ ಸರಿದಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೂ ಮುನ್ನ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, ಮತ್ತೆ ವರದಿಗಾರರು ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದ್ದರಿಂದ, ರೋಹಿತ್ ಅಸಮಾಧಾನ ವ್ಯಕ್ತಪಡಿಸಿದರು.
ಇದೆಲ್ಲಾ ನಿಮ್ಮಿಂದ ಶುರುವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ನೀವೆಲ್ಲಾ(ಮಾಧ್ಯಮ) ಕೆಲವು ಸಮಯ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ. ನಿಮ್ಮ ಕಡೆಯಿಂದ ಈ ಚರ್ಚೆ ನಿಂತರೆ ಎಲ್ಲವನ್ನು ಸರಿಪಡಿಸಿಕೊಳ್ಳಬಹುದು ಎಂದು ತಮ್ಮ ಮಾಜಿ ನಾಯಕನ ಬೆನ್ನಿಗೆ ನಿಂತರು.
ಕೊಹ್ಲಿ ಒತ್ತಡದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್, ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರು ಒಂದು ದಶಕಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಅಂತಾರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ಆಡಿದ ಅನುಭವ ಇರುವುದರಿಂದ ಅವರಿಗೆ ಹೇಗೆ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಬೇಕೆಂದು ಚೆನ್ನಾಗಿ ತಿಳಿದಿದೆ. ಯಾರೂ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದರು.
ವಿರಾಟ್ ಕೊಹ್ಲಿ 2019ರಿಂದ ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಬಾರಿಸಿಲ್ಲ ಎಂಬುದ ಬಗ್ಗೆ ರೋಹಿತ್ ಪ್ರತಿಕ್ರಿಯಿಸಿ, ಶತಕ ಸಿಡಿಸದಿರುವುದು ಫಾರ್ಮ್ ಕಳೆದುಕೊಂಡಂತಲ್ಲ. ಅವರು ನಿರಂತರವಾಗಿ ಅರ್ಧಶತಕ ಸಿಡಿಸುತ್ತಿದ್ದಾರೆ.
ಹಾಗಾಗಿ, ಅವರಿಗೆ ಆತ್ಮವಿಶ್ವಾಸದ ಕೊರತೆ ಉಂಟಾಗಿಲ್ಲ. ಸದ್ಯಕ್ಕೆ ಮಾಧ್ಯಮದವರು ಅವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ, ಎಲ್ಲವೂ ಸರಿಯಾಗುತ್ತದೆ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಪಂದ್ಯಗಳು ಫೆಬ್ರವರಿ 16, 18 ಮತ್ತು 20ರಂದು ನಡೆಯಲಿವೆ.
ಇದನ್ನೂ ಓದಿ:ವಿಂಡೀಸ್ ಟಿ-20 ಸರಣಿಯಿಂದ ಕೆ.ಎಲ್.ರಾಹುಲ್ ಔಟ್: ಉಪನಾಯಕನಾಗಿ ರಿಷಬ್ ಪಂತ್ಗೆ ಬಡ್ತಿ