ಕೊಲಂಬೊ:ಶ್ರೀಲಂಕಾ ಕ್ರಿಕೆಟ್ ತಂಡದ ಲೆಜೆಂಡರಿ ಬೌಲರ್ ಲಸಿತ್ ಮಲಿಂಗಾ ತಂಡದ ಬೌಲಿಂಗ್ ಸ್ಟ್ರಾಟರ್ಜಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಗೋಸ್ಕರ ಅವರನ್ನ ನೇಮಕ ಮಾಡಿ, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಆಸ್ಟ್ರೇಲಿಯಾ-ಶ್ರೀಲಂಕಾ ನಡುವೆ ಜೂನ್ 7ರಿಂದ ಮೂರು ಟಿ-20 ಪಂದ್ಯಗಳ ಸರಣಿ ಹಾಗೂ ಐದು ಏಕದಿನ ಪಂದ್ಯಗಳು ನಡೆಯಲಿದ್ದು, ಅದಕ್ಕೋಸ್ಕರ ಈಗಾಗಲೇ ಕಾಂಗರೂ ಪಡೆ ಶ್ರೀಲಂಕಾದಲ್ಲಿ ಅಭ್ಯಾಸ ಆರಂಭಿಸಿದೆ. ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ಲಂಕಾ ತಂಡ ನಿಗದಿತ ಓವರ್ಗಳ ಕ್ರಿಕೆಟ್ ಸರಣಿ ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಮಲಿಂಗಾ ಬೌಲಿಂಗ್ ಸ್ಟ್ರಾಟರ್ಜಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ಅವರನ್ನ ಆಯ್ಕೆ ಮಾಡಲಾಗಿದೆ.
38 ವರ್ಷದ ಲಸಿತ್ ಮಲಿಂಗಾ ಈಗಾಗಲೇ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಬರೋಬ್ಬರಿ 11 ವರ್ಷಗಳ ಕಾಲ ಐಪಿಎಲ್ ಆಡಿರುವ ಮಲಿಂಗಾ 122 ಪಂದ್ಯಗಳನ್ನಾಡಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಯಾರ್ಕರ್ ಕಿಂಗ್ ಲಸಿತ್ ಮಲಿಂಗಾ ವಿದಾಯ
2014ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದ ತಂಡದ ಕ್ಯಾಪ್ಟನ್ ಆಗಿದ್ದ ಲಸಿತ್ ಮಲಿಂಗಾ, ಎಲ್ಲ ಮಾದರಿ ಕ್ರಿಕೆಟ್ನಿಂದ 546 ವಿಕೆಟ್ ಪಡೆದುಕೊಂಡಿದ್ದಾರೆ. 2007ರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು, ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದರು. 38 ವರ್ಷದ ಮಲಿಂಗಾ 2011ರಲ್ಲಿ ಟೆಸ್ಟ್ ಕ್ರಿಕೆಟ್ ಹಾಗೂ 2019ರಲ್ಲಿ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದರು.