ಕೊಲಂಬೊ(ಶ್ರೀಲಂಕಾ):ಇಂಗ್ಲೆಂಡ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಬಯೋಬಬಲ್ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ವರ್ಷಗಳ ಕಾಲ ಅಮಾನತುಗೊಂಡಿದ್ದ ಶ್ರೀಲಂಕಾದ ಮೂವರು ಪ್ಲೇಯರ್ಸ್ ಮೇಲಿನ ನಿಷೇಧವನ್ನು ಇದೀಗ ಹಿಂಪಡೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಾಹಿತಿ ಹಂಚಿಕೊಂಡಿದೆ.
ಕಳೆದ ಜುಲೈ ತಿಂಗಳಲ್ಲಿ ಲಂಡನ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶ್ರೀಲಂಕಾದ ಉಪ ನಾಯಕ ಕುಶಾಲ್ ಮೆಂಡಿಸ್, ಆರಂಭಿಕ ಆಟಗಾರ ದನುಷ್ಕಾ ಗುಣತಿಲಕ ಹಾಗೂ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಕೋವಿಡ್ ನಿಯಮ ಉಲ್ಲಂಘನೆ ಮಾಡಿ, ಲಂಡನ್ನ ವಿವಿಧ ಸ್ಥಳಗಳಲ್ಲಿ ಸುತ್ತಾಡಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಶ್ರೀಲಂಕಾ ಮಹತ್ವದ ನಿರ್ಧಾರ ಕೈಗೊಂಡು, ಎರಡು ವರ್ಷ ನಿಷೇಧಕ್ಕೊಳಪಡಿಸಿ, ಒಂದು ವರ್ಷಗಳ ಅಮಾನತಿನಲ್ಲಿ ಇಟ್ಟಿತ್ತು. ಇದರ ಜೊತೆಗೆ ಪ್ಲೇಯರ್ಸ್ಗಳಿಗೆ 50000 ಡಾಲರ್ ದಂಡ ವಿಧಿಸಿದೆ.
ಇದನ್ನೂ ಓದಿ:ಆ್ಯಷಸ್ ಕ್ರಿಕೆಟ್ ಟೆಸ್ಟ್: ಮುಳುಗುತ್ತಿದ್ದ ಆಂಗ್ಲರ ತಂಡಕ್ಕೆ ಬೈರ್ಸ್ಟೋ ಶತಕದಾಸರೆ
ಆದರೆ, ಇದೀಗ ಮೂವರು ಪ್ಲೇಯರ್ಸ್ ಮೇಲಿನ ನಿಷೇಧ ತಕ್ಷಣದಿಂದಲೇ ಜಾರಿಗೊಳಪಡುವಂತೆ ಹಿಂಪಡೆದುಕೊಂಡಿದೆ. ಆದರೆ ಇವರ ನಡವಳಿಕೆ ಮೇಲೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮೇಲ್ವಿಚಾರಣೆ ಮುಂದುವರೆಸಲಿದೆ ಎಂದು ತಿಳಿಸಿದೆ. ಆಟಗಾರರ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀಲಂಕಾ ಬೋರ್ಡ್ ಮಾಹಿತಿ ನೀಡಿದ್ದು,ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿಯಾಗಲಿದ್ದಾರೆಂದು ತಿಳಿಸಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳಲ್ಲಿ ಸೋಲು ಕಂಡಿದ್ದ ಲಂಕಾ ತಂಡ ತದನಂತರ ಏಕದಿನ ಸರಣಿಯಲ್ಲಿ ಭಾಗಿಯಾಗಬೇಕಾಗಿದ್ದ ಸಂದರ್ಭದಲ್ಲಿ ಉಪನಾಯಕ ಕುಶಾಲ್ ಮೆಂಡಿಸ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನಿರೋಷನ್ ಡಿಕ್ವೆಲ್ಲಾ ಹಾಗೂ ಧನುಷ್ಕಾ ಗುಣತಿಲಕ್ ಬಯೋಬಬಲ್ ಗಾಳಿಗೆ ತೂರಿ, ವಿವಿಧ ಮಾರ್ಕೆಟ್ ಪ್ರದೇಶಗಳಲ್ಲಿ ಜಾಲಿಯಾಗಿ ಅಡ್ಡಾಡುತ್ತಿದ್ದರು. ಇದರ ವಿಡಿಯೋ ತುಣುಕು ವೈರಲ್ ಆಗಿತ್ತು.