ಢಾಕಾ(ಬಾಂಗ್ಲಾದೇಶ): ಆತಿಥೇಯ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ತಂಡದ ಬ್ಯಾಟರ್ ಕುಶಲ್ ಮೆಂಡಿಸ್ ದಿಢೀರ್ ಆಗಿ ಕುಸಿದು ಬಿದ್ದಿದ್ದಾರೆ. ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣವೇ ಅವರನ್ನು ಢಾಕಾ ಆಸ್ಪತ್ರೆಗೆ ದಾಖಲು ಮಾಡಿ, ಎದೆ ಸ್ಕ್ಯಾನ್ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ಭೋಜನ ವಿರಾಮಕ್ಕೆ ವಿಶ್ರಾಂತಿ ನೀಡಲು ಕೇವಲ ಒಂದು ಓವರ್ ಬಾಕಿ ಇರುವಾಗ ಈ ಘಟನೆ ನಡೆದಿದೆ.
ಢಾಕಾದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ECG ಮಾಡಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಿರ್ಜಲೀಕರಣ ಅಥವಾ ಸ್ನಾಯು ಸೆಳೆತದ ಸಮಸ್ಯೆಯಿಂದ ಮೆಂಡಿಸ್ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಅಸ್ವಸ್ಥಗೊಂಡು ಮೈದಾನದಲ್ಲಿ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕುಶಲ್ ಮೆಂಡಿಸ್ ಅವರ ಮೇಲೆ ಲಂಕಾ ಕ್ರಿಕೆಟ್ ತಂಡದ ಮ್ಯಾನೇಜರ್ ಮಹಿಂದಾ ಹಲಂಗೋಡ ನಿಗಾ ವಹಿಸಿದ್ದಾರೆ.