ಕೊಲಂಬೊ (ಶ್ರೀಲಂಕಾ): ಎಡಗೈ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜಿಸಲಾಗಿರುವ ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕುಲದೀಪ್, ಲಂಕಾ ನೆಲದಲ್ಲಿ ತಮ್ಮ ಸ್ಪಿನ್ ಮೋಡಿ ಮಾಡುತ್ತಿದ್ದಾರೆ. ಏಷ್ಯಾಕಪ್ನ ಕಳೆದ ಎರಡು ಇನ್ನಿಂಗ್ಸ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಕುಲದೀಪ್ ಐಸಿಸಿ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ.
ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದಲ್ಲದೇ, ಕೊನೆಯಲ್ಲಿ ಎರಡು ವಿಕೆಟ್ ಪಡೆದು 4 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಕುಲದೀಪ್ ಯಾದವ್ 150 ಏಕದಿನ ವಿಕೆಟ್‌ಗಳ ಗಡಿ ತಲುಪಿದರು. ಯಾದವ್ ಕೇವಲ 88 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕುಲದೀಪ್ ನಿನ್ನೆಯ ಪಂದ್ಯದಲ್ಲಿ 9.3 ಓವರ್ ಮಾಡಿ 4.52 ಎಕಾನಮಿ ದರದಲ್ಲಿ 43 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು. ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ ಅವರ ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಬಳಿಕ ಕಸುನ್ ರಜಿತ ಮತ್ತು ಮತೀಶ ಪತಿರಣ ಅವರನ್ನು ತೆಗೆದು ಲಂಕಾದ ಸರ್ವಪತನಕ್ಕೆ ಕಾರಣರಾದರು.