ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರ, ವಿಕೆಟ್ ಕೀಪರ್ ಶ್ರೀಕರ್ ಭರತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಧೋನಿಯಿಂದ ಸಲಹೆ ಪಡೆದಿದ್ದೇನೆ ಎಂದಿದ್ದಾರೆ. ಭಾರತದ ಮಾಜಿ ನಾಯಕ ಧೋನಿ ನಾಯಕರಾಗಿ ಎಷ್ಟು ಯಶಸ್ವಿಯೋ ಅದರ ಎರಡು ಪಟ್ಟು ವಿಕೆಟ್ ಕೀಪಿಂಗ್‌ನಲ್ಲಿ ಯಶ ಸಾಧಿಸಿದ್ದಾರೆ. 41 ವರ್ಷದ ಮಾಹಿ ವಿಕೆಟ್ ಹಿಂದೆ ಈಗಲೂ ಪಾದರಸದಂತೆ ಚುರುಕು. ಬ್ಯಾಟರ್ ಒಂದು ಕ್ಷಣ ಕಾಲನ್ನು ಕ್ರೀಸ್ನಿಂದ ಹೊರಗಿಟ್ಟರೆ ಸ್ಟಂಪ್ ಮಾಡಿ ಔಟ್ ಮಾಡುವಷ್ಟು ಚತುರ ಈ ಧೋನಿ. ಇದಕ್ಕೆ ಸಾಕ್ಷಿಯಾಗಿ ಐಪಿಎಲ್ ಫೈನಲ್ನಲ್ಲಿ ಶುಭಮನ್ ಗಿಲ್ ಔಟ್ ಆಗಿದ್ದನ್ನು ಪರಿಗಣಿಸಬಹುದು.
ಅತಿ ಹೆಚ್ಚು ವೇಗದಲ್ಲಿ ಸ್ಟಂಪ್ ಮಾಡಿದ ದಾಖಲೆ ಮತ್ತು ವಿಕೆಟ್ಗಳನ್ನು ಉರುಳಿಸಿದ ರೆಕಾರ್ಡ್ ಸಹ ಧೋನಿ ಹೆಸರಿನಲ್ಲಿದೆ. ವಿದೇಶಿ ಕೀಪರ್ಗಳಿಗೂ ಧೋನಿ ಒಬ್ಬ ಮಾದರಿ ವಿಕೆಟ್ ಕೀಪರ್ ಆಗಿದ್ದಾರೆ. ಭಾರತದ ಮುಂದಿನ ಪೀಳಿಗೆ ಕೀಪರ್ಗಳಿಗೆ ಧೋನಿ ಸ್ಪೂರ್ತಿಯ ಸೆಲೆ. ಕಳೆದ ಕೆಲ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ಪಂದ್ಯದ ನಂತರ ಯುವ ಆಟಗಾರರ ಜೊತೆ ಮಾತನಾಡಿ ಅವರಿಗೆ ಸಲಹೆಗಳನ್ನು ಕೊಡುತ್ತಿರುವುದನ್ನು ಕಾಣಬಹುದು. ಧೋನಿ ಮುಕ್ತವಾಗಿ ಎಲ್ಲರಲ್ಲೂ ಬೆರೆತು ಹೇಳಿಕೊಡುವ ವಿಡಿಯೋಗಳು ಕಾಣಸಿಗುತ್ತವೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಗುಜರಾತ್ ಟೈಟಾನ್ಸ್ನಲ್ಲಿ ತಂಡದಲ್ಲಿ ವೃದ್ಧಿಮಾನ್ ಸಹಾ ಇದ್ದುದ್ದರಿಂದ ಶ್ರೀಕರ್ ಭರತ್ಗೆ ಈ ಆವೃತ್ತಿಯಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ ಫೈನಲ್ ಪಂದ್ಯದ ನಂತರ ಧೋನಿಯೊಂದಿಗೆ ಸಂಭಾಷಣೆ ಮಾಡಿರುವುದಾಗಿ ಶ್ರೀಕರ್ ಹೇಳಿದ್ದಾರೆ.
ಶ್ರೀಕರ್ ಭರತ್ ಅವರು ಐಸಿಸಿ ನಡೆಸಿದ ಸಂದರ್ಶನವೊಂದರಲ್ಲಿ ಧೋನಿ ಬಗ್ಗೆ ಮಾತನಾಡಿದರು. ನಿಮ್ಮ ಫೇವರೇಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಅವರು ಎಂ.ಎಸ್.ಧೋನಿ ಎಂದು ಹೇಳಿ ಐಪಿಎಲ್ನಲ್ಲಿ ಅವರೊಂದಿಗೆ ಸಂಭಾಷಣೆ ಮಾಡಿದ ಕ್ಷಣಗಳ ಬಗ್ಗೆ ತಿಳಿಸಿದರು.