ಮುಂಬೈ:ಇತ್ತೀಚೆಗೆ ಕೋವಿಡ್-19ನಿಂದ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಬಳಿಕ ‘ಸಂಪೂರ್ಣವಾಗಿ ನಾಶವಾದೆ’ ಎಂದು ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಇಎಸ್‌ಪಿಎನ್ ಕ್ರಿಕ್ ಇನ್ಫೋ ಸಂದರ್ಶನದಲ್ಲಿ ಹೇಳಿದ್ದಾರೆ.
ನಿಧಾನವಾಗಿ ಆ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ವೇದಾ ಕೃಷ್ಣಮೂರ್ತಿಯ ಕುಟುಂಬದ ಒಂಬತ್ತು ಮಂದಿ ಕೊರೊನಾಗೆ ತುತ್ತಾಗಿ ತತ್ತರಿಸಿದ್ದಾರೆ. ಎರಡು ವಾರಗಳ ಅಂತರದಲ್ಲಿ ವೇದಾ ಅವರ ತಾಯಿ ಮತ್ತು ಸಹೋದರಿ ಕಳೆದ ತಿಂಗಳು ಕಡೂರಿನಲ್ಲಿ ಮೃತಪಟ್ಟರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಹಣೆಬರಹದ ಬಗ್ಗೆ ನಾನು ತುಂಬಾ ನಂಬಿಕೆ ಇಟ್ಟವಳಾಗಿದ್ದೇನೆ. ನನ್ನ ಅಕ್ಕ ಗುಣಮುಖಳಾಗಿ ಮನೆಗೆ ಹಿಂದಿರುಗಬಹುದೆಂದು ನಾನು ನಿಜವಾಗಿಯೂ ಆಶಿಸಿದ್ದೆ. ಅವಳು ವಾಪಸ್ ಬರದಿದ್ದಾಗ, ನಾನು ಸಂಪೂರ್ಣವಾಗಿ ನಾಶವಾದೆ. ನಾವು ಸಂಪೂರ್ಣ ಕುಸಿದಿದ್ದೇವೆ’ ಎಂದು ವೇದಾ ಕೃಷ್ಣಮೂರ್ತಿ ನೋವು ತೋಡಿಕೊಂಡಿದ್ದಾರೆ.
‘ನನ್ನ ಕುಟುಂಬದ ಉಳಿದವರಿಗಾಗಿ ನಾನು ಧೈರ್ಯಶಾಲಿಯಾಗಿ ಇರಬೇಕಿತ್ತು. ಆ ಪರೀಕ್ಷೆಯ ಒಂದೆರಡು ವಾರಗಳಲ್ಲಿ ನಾನು ನನ್ನ ದುಃಖದಿಂದ ಹೊರಬರಲು ಕಲಿತೆ. ಆದರೆ, ಅಷ್ಟು ಸುಲಭವಾಗಿ ಅದು ನಮ್ಮನ್ನು ಬಿಡುವುದಿಲ್ಲ ಮತ್ತೆ ಮತ್ತೆ ನನ್ನನ್ನು ಕಾಡುತ್ತದೆ’ ಎಂದು ವೇದಾ ಹೇಳಿದ್ದಾರೆ.
ಕೋವಿಡ್ ಎದುರಿಸಲು ಮಾನಸಿಕ ಶಕ್ತಿ ಮುಖ್ಯ
ನನ್ನ ಕುಟುಂಬದ ಪೈಕಿ ನಾನೊಬ್ಬಳು ಮಾತ್ರ ಕೊರೊನಾ ಸೋಂಕಿಗೆ ತುತ್ತಾಗಿಲ್ಲ ಎಂದು ಮಧ್ಯಮ ಕ್ರಮಾಂಕದ ಆಟಗಾರ್ತಿ ಹೇಳಿದ್ದಾರೆ.