ಕ್ರಿಕೆಟ್ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಎಂದಾಗ ತಕ್ಷಣಕ್ಕೆ ನೆನಪಾಗುವುದೇ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ 6x6 ಹೊಡೆದು ಕ್ರಿಕೆಟ್ ಪಾಠ ಮಾಡಿದ್ದರು. ಇದಾದ ಬಳಿಕ ವೆಸ್ಟ್ ಇಂಡೀಸ್ನ ಕಿರನ್ ಪೊಲಾರ್ಡ್ ಕೂಡ ಇದೇ ಸಾಧನೆಯನ್ನು ಮಾಡಿದ್ದರು.
ಇದೀಗ ಯುವ ಆಟಗಾರನೊಬ್ಬ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದಾರೆ. ಅದೂ ಟಿ-10 ಲೀಗ್ನಲ್ಲಿ ಎಂಬುದು ವಿಶೇಷ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಆ ಸಾಧಕನ ಹೆಸರು ಕೃಷ್ಣ ಪಾಂಡೆ.
6 ಸಿಕ್ಸರ್ ಸಿಡಿಸಿದ ಕೃಷ್ಣ ಪಾಂಡೆ:ಪುದುಚೇರಿಯಲ್ಲಿ ನಡೆದ ಟಿ-10 ಲೀಗ್ನಲ್ಲಿ ಪೆಟ್ರಿಯಾಟ್ಸ್ ತಂಡದ ಬಲಗೈ ದಾಂಡಿಗ ಕೃಷ್ಣ ಪಾಂಡೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ. ಶನಿವಾರ ನಡೆದ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೃಷ್ಣ ಪಾಂಡೆ ಬೌಲರ್ ನಿತೇಶ್ ಠಾಕೂರ್ ಎಸೆದ ಓವರ್ನಲ್ಲಿ ಮೈದಾನದಲ್ಲಿ ಸಿಕ್ಸರ್ ಮಳೆ ಸುರಿಸಿದರು. ಸತತ 6 ಎಸೆತಗಳಲ್ಲಿ ಬೌಂಡರಿ ಗೆರೆ ದಾಟಿಸಿದರು. ಇದಲ್ಲದೇ, ಪಂದ್ಯದಲ್ಲಿ ಕೇವಲ 19 ಎಸೆತಗಳನ್ನು ಆಡಿದ ಕೃಷ್ಣ ಪಾಂಡೆ ಸತತ 12 ಸಿಕ್ಸರ್ ಬಾರಿಸಿ ಒಟ್ಟು 83 ರನ್ ಗಳಿಸಿದರು.