ಮುಂಬೈ:ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ 153ರನ್ಗಳ ಗುರಿ ಸುಲಭವಾಗಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನೂ 5 ಎಸೆತಗಳು ಬಾಕಿ ಇರುವಂತೆ ಕೇವಲ 3 ವಿಕೆಟ್ ಕಳೆದುಕೊಂಡು 158ರನ್ಗಳಿಸಿ, ಗೆಲುವಿನ ಗುರಿ ಮುಟ್ಟಿತು. ಈ ಮೂಲಕ ಸತತ ಸೋಲಿನಿಂದ ಕಂಗೆಟ್ಟಿದ ಅಯ್ಯರ್ ಪಡೆ ಕೊನೆಗೂ ಜಯದ ನಗೆ ಬೀರಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಯಲ್ಸ್ ಆರಂಭದಲ್ಲೇ ದೇವದತ್ ಪಡಿಕ್ಕಲ್(2) ವಿಕೆಟ್ ಕಳೆದುಕೊಂಡಿತು. ಟೂರ್ನಿಯಲ್ಲಿ ಅಮೋಘ ಫಾರ್ಮ್ನಲ್ಲಿದ್ದ ಜಾಸ್ ಬಟ್ಲರ್ ಇಂದು ರನ್ಗಳಿಸಲು ಪರದಾಡಿದರು. ಅವರು 25 ಎಸೆತಗಳಲ್ಲಿ ಕೇವಲ 22 ರನ್ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸಾಮ್ಸನ್ ಅರ್ಧಶತಕ ಸಿಡಿಸಿದರಾದರೂ ಅವರೂ ಕೂಡ 110 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಅವರು 49 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 54 ರನ್ಗಳಿಸಿ ಯುವ ವೇಗಿ ಶಿವಂ ಮಾವಿ ಬೌಲಿಂಗ್ನಲ್ಲಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದರು.
ಕೊನೆಯಲ್ಲಿ ಅಬ್ಬರಿಸಿದ ಹೆಟ್ಮಾಯರ್ 13 ಎಸೆತಗಳಲ್ಲಿ 27 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ರಿಯಾನ್ ಪರಾಗ್ 12 ಎಸೆತಗಳಲ್ಲಿ 19 ರನ್ಗಳಿಸಿದರೆ, ಕರುಣ್ ನಾಯರ್ 13 ಎಸೆತಗಳಲ್ಲಿ 13, ಅಶ್ವಿನ್ 5 ಎಸೆತಗಳಲ್ಲಿ 6 ರನ್ಗಳಿಸಿದರು. ಕೆಕೆಆರ್ ಪರ ಉಮೇಶ್ ಯಾದವ್ 24ಕ್ಕೆ1 , ಅನುಕುಲ್ ರಾಯ್ 28ಕ್ಕೆ1, ಶಿವಂ ಮಾವಿ 33ಕ್ಕೆ1 ಮತ್ತು ಟಿಮ್ ಸೌತಿ 46ಕ್ಕೆ 2 ವಿಕೆಟ್ ಪಡೆದರು.
ಕೋಲ್ಕತ್ತಾ ಬ್ಯಾಟಿಂಗ್: ನೀತಿಶ್ ರಾಣಾ ಅಜೇಯ 48ರನ್ ಹಾಗೂ ರಿಂಕು ಸಿಂಗ್ ಅಜೇಯ 42ರನ್ಗಳ ನೆರವು ಹಾಗೂ ಬೌಲರ್ಗಳ ಕರಾರುವಾಕ್ ದಾಳಿಯಿಂದ ತಂಡ ಗೆಲುವಿನ ದಡ ಸೇರಿತು. ತಂಡದ ಪರ ವೆಂಕಟೇಶ್ ಅಯ್ಯರ್ ಬದಲಾಗಿ ಅವಕಾಶ ಪಡೆದುಕೊಂಡಿದ್ದ ಬಾಬಾ ಇಂದ್ರಜಿತ್(15),ಫಿಂಚ್(4)ನಿರಾಸೆ ಮೂಡಿಸಿದರು.ಆದರೆ, ಕ್ಯಾಪ್ಟನ್ ಶ್ರೇಯಸ್ 34ರನ್ಗಳಿಕೆ ಮಾಡಿದರು. ಕೊನೆಯದಾಗಿ ರಿಂಕು-ರಾಣಾ ಮುರಿಯದ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದಿಟ್ಟರು.