ಸಿಡ್ನಿ(ಆಸ್ಟ್ರೇಲಿಯಾ): ಐಸಿಸಿ ಟಿ-20 ವಿಶ್ವಕಪ್ ಆರಂಭಗೊಳ್ಳಲು ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಕೇವಲ ಮೂರು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಅಕ್ಟೋಬರ್ 24ರಂದು ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ.
ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಭಾರತ ತಂಡ ಟಿ - 20 ವಿಶ್ವಕಪ್ನಲ್ಲಿ ಇನ್ - ಫಾರ್ಮ್ ಬ್ಯಾಟರ್ ಕೆ.ಎಲ್ ರಾಹುಲ್ನನ್ನ ಇನ್ನಿಂಗ್ಸ್ನ ಆಧಾರಸ್ತಂಭವನ್ನಾಗಿಸಬೇಕು ಎಂದು ಬ್ರೆಟ್ ಲೀ ಸಲಹೆ ನೀಡಿದ್ದಾರೆ.
ಸುದ್ದಿ ವಾಹಿನಿವೊಂದಕ್ಕೆ ಸಂದರ್ಶನ ನೀಡಿರುವ ಲೀ, ಅನುಭವದ ಆಧಾರದ ಮೇಲೆ ಇಂಗ್ಲೆಂಡ್ ಇತರ ತಂಡಗಳಿಗೆ ದೊಡ್ಡ ಸವಾಲು ಆಗಬಹುದು ಎಂದಿರುವ ಅವರು, ಭಾರತ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಲಿದ್ದಾರೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಿಂದಾಗಿ ಭಾರತ ಅನೇಕ ಯುವ ಪ್ಲೇಯರ್ಸ್ ಹೊಂದಿದ್ದು, ಅವರಲ್ಲಿ ಪ್ರಮುಖ ವೇಗದ ಬೌಲರ್ಗಳಿದ್ದಾರೆ. ಜೊತೆಗೆ ಟೀಂ ಇಂಡಿಯಾ ಅಗ್ರ ಬ್ಯಾಟಿಂಗ್ ಕ್ರಮಾಂಕ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ.