ಮುಂಬೈ: ಇತ್ತ ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿ ನಡೆದಿರುವ ಬೆನ್ನಲ್ಲೇ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಆಡಲು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಇನ್ನೂ ಕೆಲ ಆಟಗಾರರು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ.
5 ಟೆಸ್ಟ್ ಮ್ಯಾಚ್ಗಳ ಸರಣಿಯಲ್ಲಿ ಸದ್ಯ ಭಾರತ 2-1 ರಿಂದ ಮುನ್ನಡೆ ಕಾಯ್ದುಕೊಂಡಿದೆ. ಈಗ ಕೊನೆಯ ಹಾಗೂ 5ನೇ ಟೆಸ್ಟ್ ಮ್ಯಾಚಿನ ದಿನಾಂಕವನ್ನು ಮರು ನಿಗದಿಗೊಳಿಸಲಾಗಿದ್ದು, ಜುಲೈ 1 ರಿಂದ 5 ರವರೆಗೆ ಬರ್ಮಿಂಗ್ ಹ್ಯಾಂನ ಎಜ್ ಬಾಸ್ಟನ್ ನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ 17 ಆಟಗಾರರ ಪಟ್ಟಿಯನ್ನು ಆಯ್ಕೆ ಸಮಿತಿ ಈಗಾಗಲೇ ಬಿಡುಗಡೆ ಮಾಡಿದೆ.
ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿರುವ ತಂಡದ ಸದಸ್ಯರಲ್ಲದ ಆಟಗಾರರು ಇಂಗ್ಲೆಂಡ್ಗೆ ಪ್ರವಾಸ ಬೆಳೆಸಿದ ಚಿತ್ರಗಳನ್ನು ಬಿಸಿಸಿಐ ಟ್ವೀಟ್ ಮಾಡಿದೆ. 17 ಆಟಗಾರರ ಪೈಕಿ ವಿರಾಟ್ ಕೊಹ್ಲಿ, ಓಪನರ್ ಶುಬ್ಮನ್ ಗಿಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಚೇತೇಶ್ವರ ಪೂಜಾರಾ ಗುರುವಾರದಂದು ಇಂಗ್ಲೆಂಡ್ಗೆ ಪ್ರಯಾಣ ಆರಂಭಿಸಿದ್ದಾರೆ.