ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವಿಸ್ಡನ್ ಘೋಷಿಸಿರುವ ದಶಕದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ನಂತರ ಈ ಪ್ರಶಸ್ತಿ ಪಡೆದ 3ನೇ ಭಾರತೀಯ ಆಟಗಾರ ಎಂಬ ಶ್ರೇಯಕ್ಕೆ ಕೊಹ್ಲಿ ಪಾತ್ರರಾಗಿದ್ದಾರೆ.
ಕೊಹ್ಲಿ 2010-2021ರ ಆವೃತ್ತಿಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1971ರಿಂದ 10 ವರ್ಷಗಳ ಕ್ರಿಕೆಟ್ ಸಾಧನೆಯ ಆಧಾರದ ಮೇಲೆ ಈ ಪ್ರಶಸ್ತಿಯನ್ನು ವಿಸ್ಡನ್ ನೀಡುತ್ತಿದೆ. ಇದುವರೆಗೂ 5 ಆಟಗಾರರು ಕಳೆದ 50 ವರ್ಷಗಳಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೊಹ್ಲಿ ಕೂಡ ಆಟಗಾರರ ಲಿಸ್ಟ್ನಲ್ಲಿ 5ನೇಯವರಾಗಿ ದಿಗ್ಗಜರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.
2011ರಲ್ಲಿ ಏಕದಿನ ವಿಶ್ವಕಪ್ನಲ್ಲಿ ತಮ್ಮ ದಶಕವನ್ನು ಆರಂಭಿಸಿದ ಕೊಹ್ಲಿ, ನಂತರ 50 ಓವರ್ಗಳ ಕ್ರಿಕೆಟ್ನಲ್ಲಿ ಮುಂಚೂಣಿ ಬ್ಯಾಟ್ಸ್ಮನ್ ಆಗಿ ಮಿಂಚಿದ್ದಾರೆ. ಭಾರತ ತಂಡದ ನಾಯಕ ಈ 10 ವರ್ಷಗಳಲ್ಲಿ 60ರ ಸರಾಸರಿಯಲ್ಲಿ 42 ಶತಕಗಳ ಸಹಿತ 11,125 ರನ್ ಬಾರಿಸಿದ್ದಾರೆ.
ಕೊಹ್ಲಿ ಮೊದಲು ಭಾರತದ ದಂತಕಥೆಗಳಾದ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ (1980), ಸಚಿನ್ ತೆಂಡೂಲ್ಕರ್ (1990) ವಿಸ್ಡನ್ ದಶಕದ ಪ್ರಶಸ್ತಿಗೆ ಭಾಜನರಾಗಿದ್ದರು. ಸಚಿನ್ 1998ರ ವರ್ಷದಲ್ಲಿ ಬರೋಬ್ಬರಿ 9 ಶತಕ ಸಿಡಿಸಿದ್ದರು. ಇದು ಕ್ಯಾಲೆಂಡರ್ ವರ್ಷದಲ್ಲಿ ಬ್ಯಾಟ್ಸ್ಮನ್ ಒಬ್ಬನಿಂದ ದಾಖಲಾಗಿರುವ ಗರಿಷ್ಠ ಶತಕವಾಗಿದೆ.
1970ರ ದಶಕದ ಪ್ರಶಸ್ತಿ ವೆಸ್ಟ್ ಇಂಡೀಸ್ ದಂತಕಥೆ ವಿವಿಯನ್ ರಿಚರ್ಡ್ಸನ್ ಪಾಲಾಗಿದೆ. 70 ದಶಕದಲ್ಲಿ ಕ್ರಿಕೆಟ್ನಲ್ಲಿ ಪ್ರಾಬಲ್ಯ ಮೆರೆದಿದ್ದ ವಿಂಡೀಸ್ ಸತತ 2 ವಿಶ್ವಕಪ್ ಗೆದ್ದಿತ್ತು. 1970ರ ವಿಶ್ವಕಪ್ನಲ್ಲಿ ಅಜೇಯ ಶತಕ ಬಾರಿಸಿ ವಿಂಡೀಸ್ಗೆ ಚೊಚ್ಚಲ ವಿಶ್ವಕಪ್ ಗೆಲ್ಲಲು ರಿಚರ್ಡ್ಸ್ ನೆರವಾಗಿದ್ದರು.
2000-2010 ದಶಕದ ಆಟಗಾರನಾಗಿ ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಆಯ್ಕೆಯಾಗಿದ್ದರು. ಅವರು ಈ ಅವಧಿಯಲ್ಲಿ 335 ವಿಕೆಟ್ ಪಡೆದಿದ್ದರು. ಅಲ್ಲದೆ 2011ರಲ್ಲಿ ಶ್ರೀಲಂಕಾ ಫೈನಲ್ ಪ್ರವೇಶಿಸಲು ಇವರ ಪಾತ್ರ ಮಹತ್ವವಾಗಿತ್ತು.
ಇದನ್ನು ಓದಿ:ಐಪಿಎಲ್ 2021: ಕೊನೆಯ ಘಳಿಗೆಯಲ್ಲಿ ಶಹ್ಬಾಜ್ ಕಮಾಲ್... ಹೈದರಾಬಾದ್ ವಿರುದ್ಧ ಆರ್ಸಿಬಿಗೆ 6 ರನ್ಗಳ ರೋಚಕ ಜಯ!