ಮುಂಬೈ :ಭಾರತ ತಂಡದ ಏಕದಿನ ನಾಯಕತ್ವ ಬದಲಾವಣೆ ವಿಚಾರವಾಗಿ ಕೊಹ್ಲಿ ಪರ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಕೀರ್ತಿ ಆಜಾದ್, ವಿರಾಟ್ ಬೇಸರಗೊಂಡಿಲ್ಲ. ಆಯ್ಕೆ ಸಮಿತಿ ಏಕದಿನ ತಂಡದಿಂದ ಕೆಳಗಿಳಿಸಿದ ರೀತಿಯಿಂದ ನೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ, ಆಫ್ರಿಕಾ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಕೇವಲ ಒಂದುವರೆ ಗಂಟೆಗೂ ಮುನ್ನ ತನ್ನನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎಂಬ ವಿಚಾರವನ್ನು ತಿಳಿಸಲಾಯಿತು. ನಾನು ಸರಿ, ಒಳ್ಳೆಯದು ಎಂದು ಮಾತ್ರ ತಿಳಿಸಿದ್ದೆ ಎಂದು ಹೇಳಿದ್ದರು.
ಅದರ ಜೊತೆಗೆ ತಾವೂ ಟಿ20 ನಾಯಕತ್ವವನ್ನು ತ್ಯಜಿಸಿದ ಸಂದರ್ಭದಲ್ಲಿ ಯಾರೊಬ್ಬರು ನನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹೇಳಲಿಲ್ಲ ಎಂದು ಹೇಳುವ ಮೂಲಕ ಬಿಸಿಸಿಐ ಅಧ್ಯಕ್ಷ ಗಂಗೂಲಿ ಇದಕ್ಕೂ ಮುನ್ನ ನೀಡಿದ್ದ, 'ನಾನು ಸ್ವತಃ ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿದ್ದೆ' ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಕೀರ್ತಿ ಆಜಾದ್, ನಾಯಕತ್ವ ಬದಲಾವಣೆ ಮಾಡುವ ನಿರ್ಧಾರ ಆಯ್ಕೆಗಾರರದ್ದಾಗಿದ್ದರೆ, ಅವರು ಬಿಸಿಸಿಐ ಅಧ್ಯಕ್ಷರ ಮೂಲಕ ಹೋಗಬೇಕಿತ್ತು. ನಾನು ರಾಷ್ಟ್ರೀಯ ಆಯ್ಕೆಗಾರನಾಗಿದ್ದಾಗ ಮೊದಲು ತಂಡವನ್ನು ಆಯ್ಕೆ ಮಾಡಿದ ನಂತರ ನಾವೆಲ್ಲಾ ಬಿಸಿಸಿಐ ಅಧ್ಯಕ್ಷರ ಬಳಿ ಹೋಗುತ್ತಿದ್ದೆವು. ಅವರು ನೋಡಿ, ಸರಿ ಎಂದು ಸಹಿ ಮಾಡಿದ ನಂತರವಷ್ಟೇ ಘೋಷಣೆ ಮಾಡುತ್ತಿದ್ದೆವು. ಇದು ವಾಡಿಕೆಯಾಗಿತ್ತು ಎಂದು ತಿಳಿಸಿದ್ದಾರೆ.