ಶಾರ್ಜಾ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯಲ್ಲೂ ಟ್ರೋಫಿ ವಂಚಿತರಾಗಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಇಷ್ಟು ವರ್ಷಗಳ ಕಾಲ ನಾಯಕನಾಗಿ ಅವರ ಕೊಡುಗೆಯನ್ನು ಫ್ರಾಂಚೈಸಿ ಸ್ಮರಿಸಿಕೊಳ್ಳಲಿದೆ ಎಂದು ವೇಗಿ ಹರ್ಷಲ್ ಪಟೇಲ್ ಹೇಳಿದ್ದಾರೆ.
ಆರ್ಸಿಬಿ ನಾಯಕನಾಗಿ ಕೊಹ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದಾರೆ. ಆದರೆ, 9 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದರೂ ಒಮ್ಮೆಯೂ ತಂಡವನ್ನು ಚಾಂಪಿಯನ್ಪಟ್ಟಕ್ಕೇರಿಸುವಲ್ಲಿ ಅವರು ವಿಫಲರಾದರು. ಆದರೂ ಕೊಹ್ಲಿ ಒಬ್ಬ ಬ್ಯಾಟರ್ ಆಗಿ ತಂಡಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.
" ನಾಯಕತ್ವ ಎಂದರೆ ಅಲ್ಲಿ ನಾಯಕರಿರುತ್ತಾರೆ ಮತ್ತು ಲೀಡರ್ಗಳು ಇರುತ್ತಾರೆ. ಆದರೆ, ಕೊಹ್ಲಿ ಕೇವಲ ನಾಯಕ ಮಾತ್ರವಲ್ಲ, ಒಬ್ಬ ನಿಜವಾದ ಲೀಡರ್. ಅವರಿಗೆ ನಾಯಕತ್ವದ ಟ್ಯಾಗ್ ಇಲ್ಲ ಎಂಬ ಕಾರಣದಿಂದ, ಅವರನ್ನು ಲೀಡರ್ಗಿಂತ ಕಡಿಮೆಯಾಗಿ ನೋಡಲು ಸಾಧ್ಯವಿಲ್ಲ. ಹಾಗಾಗಿ, ಅವರು ಈ ತಂಡಕ್ಕೆ ನೀಡಿದ ಕೊಡುಗೆ ಮತ್ತು ನನ್ನ ಬೆಳವಣಿಗೆಗೆ ನೆರವಾಗಿರುವುದಕ್ಕೆ ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ" ಎಂದು ಹರ್ಷಲ್ ಪಟೇಲ್ ಕೆಕೆಆರ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲಿನ ಬಳಿಕ ನಾಯಕನನ್ನು ಗುಣಗಾನ ಮಾಡಿದ್ದಾರೆ.