ನವದೆಹಲಿ: ವಿರಾಟ್ ಕೊಹ್ಲಿ ಕಳೆದ 5 ವರ್ಷಗಳಿಂದ ಭಾರತ ತಂಡವನ್ನು ಮುಂದೆ ನಿಂತು ನಡೆಸಿದ್ದಾರೆ. ಇಂದು ಭಾರತ ತಂಡ ಹಿಂದೆ ತಿರುಗಿ ನೋಡದಂತಹ ಪರಿಸ್ಥಿತಿಯಲ್ಲಿದೆ ಎಂದರೆ ಅದರಲ್ಲಿ ಅವರ ಪಾತ್ರ ಮಹತ್ವವಾಗಿದೆ ಎಂದು ಭಾರತ ತಂಡದ ನೂತನ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
"ಅವರು (ಕೊಹ್ಲಿ) ತಂಡವನ್ನು ಹಿಂತಿರುಗಿ ನೋಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಈ ಐದು ವರ್ಷಗಳಲ್ಲಿ ನಾವು ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ಅವರು ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಾರೆ. ಅವರಲ್ಲಿ ಪ್ರತಿಯೊಂದು ಪಂದ್ಯವನ್ನು ಗೆಲ್ಲುವುದಕ್ಕೆ ಶ್ರದ್ಧೆ ಮತ್ತು ದೃಢ ನಿರ್ಣಯವಿತ್ತು ಮತ್ತು ಅದು ಇಡೀ ತಂಡಕ್ಕೆ ಸಂದೇಶವಾಗಿತ್ತು" ಎಂದು ರೋಹಿತ್ ಬಿಸಿಸಿಐ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿ ವಿಡಿಯೋದಲ್ಲಿ ಹೇಳಿದ್ದಾರೆ.
ನಾವು ಅವರ ನಾಯಕತ್ವದಲ್ಲಿ ಉತ್ತಮ ಆಟ ಆಡಿದ್ದೇವೆ. ನಾನು ಅವರ ನಾಯಕತ್ವದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ಮತ್ತು ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಈಗಲೂ ಅದನ್ನೇ ಮಾಡುತ್ತೇನೆ ಎಂದು ರೋಹಿತ್ ಹೇಳಿದ್ದಾರೆ.