ದುಬೈ :ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆರ್ಸಿಬಿ 54 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಸತತ 2 ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಬಲಿಷ್ಠ ಮುಂಬೈ ವಿರುದ್ಧ ಸುಲಭ ಜಯ ಸಾಧಿಸಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಇನ್ನು, ನಾಯಕ ಕೊಹ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಇಶಾನ್ ಕಿಶನ್ರನ್ನು ಮೈದಾನದಲ್ಲಿ ಮಾತನಾಡಿಸಿ ಸಂತೈಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 165 ರನ್ಗಳಿಸಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ಸಿಲುಕಿ 111ಕ್ಕೆ ಆಲ್‌ಔಟ್ ಆಗುವ ಮೂಲಕ 54 ರನ್ಗಳಿಂದ ಸೋಲುಂಡಿತ್ತು.
ಮುಂಬುರುವ ಟಿ20 ವಿಶ್ವಕಪ್ಗೆ ಆಯ್ಕೆಯಾಗಿರುವ ಮುಂಬೈ ಇಂಡಿಯನ್ಸ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಕ್ಕು ಮುನ್ನ ನಡೆದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 14 ಮತ್ತು ಸಿಎಸ್ಕೆ ವಿರುದ್ಧ 11 ರನ್ಗಳಿಸಿ ಔಟಾಗಿದ್ದರು.
ಕಳೆದ ವರ್ಷ 500+ ರನ್ ಬಾರಿಸಿ ಮುಂಬೈ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಿಶನ್ ಈ ವರ್ಷ ಭಾರಿ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಇವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ನಿನ್ನೆಯ ಪಂದ್ಯದ ವೈಫಲ್ಯದ ನಂತರ ಕಿಶನ್ ತುಂಬಾ ದುಃಖಕ್ಕೆ ಒಳಗಾಗಿ ಕುಳಿತಿದ್ದರು.